ಬೆಂಗಳೂರು, ಮೇ 03 (DaijiworldNews/PY) : ಭಾರತೀಯ ಸೇನೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಪುಷ್ಪವೃಷ್ಟಿಗೈದು ಗೌರವ ಸಮರ್ಪಣೆ ಮಾಡಿದೆ. ವಾಯು ಪಡೆಯ ಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್ಗಳಿಗೆ ಪುಷ್ಪವೃಷ್ಟಿ ಗೈದಿದೆ.
ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿ ವಾಯು ಸೇನೆ ಬರುವ ಮುನ್ನ ಆಸ್ಪತ್ರೆಯ ಬಿಲ್ಡಿಂಗ್ನಿಂದ ಹೊರ ಬಂದು ನಿಂತಿದ್ದು, ಈ ಸಂದರ್ಭ ಪುಷ್ಪವೃಷ್ಟಿ ಗೈಯಲಾಯಿತು. ವಾಯುಸೇನೆಯನ್ನು ವೈದ್ಯರು ಹಾಗೂ ನರ್ಸ್ ಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ.
ಕೊರೊನಾ ವಾರಿಯರ್ಸ್ ಈ ವಿಶೇಷವಾದ ಗೌರವದಿಂದ ಸಂತಸಗೊಂಡಿದ್ದಾರೆ. ಪುಷ್ಪವೃಷ್ಟಿಯ ಗೌರವದ ಬಳಿಕ ಸಿಬ್ಬಂದಿಗಳು ಹಿಪ್ ಹಿಪ್ ಹುರೇ ಎಂದು ಘೋಷಣೆ ಕೂಗಿದ್ದಾರೆ. ವಾಯುಸೇನೆಯು ಕಮಾಂಡ್ ಆಸ್ಪತ್ರೆಯ ಮೇಲೆಯೂ ಸುಮಾರು 8 ನಿಮಿಷಗಳ ಪುಷ್ಪವೃಷ್ಟಿ ಗೈದಿದೆ.
ಇಂದು ಭೂ ಸೇನೆ, ವಾಯುಸೇನೆ ಹಾಗೂ ನೌಕಾಸೇನೆ ದೇಶದ ಎಲ್ಲಾ ಆರೋಗ್ಯ ವೀರರಿಗೆ ಗೌರವ ಸಮರ್ಪಣೆ ಮಾಡುತ್ತಿದೆ. ಹೆಲಿಕಾಪ್ಟರ್ನಿಂದ ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್ದಿಂದ ಗುಜರಾತ್ನ ಕಛ್ವರೆಗೆ ಪುಷ್ಪವೃಷ್ಟಿ ಗೈಯುವ ಮೂಲಕ ವಾಯುಸೇನೆ ಗೌರವ ಸಮರ್ಪಣೆ ಮಾಡುತ್ತಿದೆ. ಇನ್ನೂ ನೌಕಾನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಮರ್ಪಿಸಲು ಭಾರತೀಯ ಸೇನೆ ಸಿದ್ದವಾಗಿದೆ.