ನವದೆಹಲಿ, ಮೇ 03 (Daijiworld News/MB) : ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ಉದ್ಯೋಗಿಗಳು ಕಡ್ಡಾಯವಾಗಿ ತಮ್ಮ ಮೊಬೈಲ್ಗಳಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕು ಹರಡಿರುವವರನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿರಬೇಕು ಎಂದು ಹೇಳಿದ್ದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, "ಆರೋಗ್ಯ ಸೇತು ಆಪ್ ಸಹಾಯಕ, ಆದರೆ ಕಣ್ಗಾವಲು ವ್ಯವಸ್ಥೆ" ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಆರೋಗ್ಯ ಸೇತು ಆಪ್ ಒಂದು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದ್ದು ಇದನ್ನು ಖಾಸಗಿ ಕಂಪನಿಯ ಹೊರಗುತ್ತಿಗೆಗೆ ನೀಡಲಾಗಿದೆ. ಇದಕ್ಕೆ ಯಾವುದೇ ಸಾಂಸ್ಥಿಕ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯಿಲ್ಲ. ಇದು ನಮ್ಮ ಖಾಸಗಿತನ ಹಾಗೂ ಮಾಹಿತಿ ಸುರಕ್ಷತೆಯ ಬಗ್ಗೆ ಗಂಭೀರ ಭಯ ಹೆಚ್ಚಿಸುತ್ತದೆ. ತಂತ್ರಜ್ಞಾನವು ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ, ಆದರೆ ನಾಗರಿಕರ ಒಪ್ಪಿಗೆಯಿಲ್ಲದೆ ಅವರನ್ನು ಪತ್ತೆಹಚ್ಚುವ ಭಯ ಹುಟ್ಟಿಸುವ ಸಾಧನವಾಗಬಹುದು" ಎಂದು ಹೇಳಿದ್ದಾರೆ.
ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಕಡ್ಡಾಯವಾಗಿ ತಮ್ಮ ಮೊಬೈಲ್ಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕು ಹರಡಿರುವವರನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿರಬೇಕು. ಕಂಪೆನಿ ನೌಕರರು ಆರೋಗ್ಯ ಸೇತು ಆಪ್ ಹೊಂದಿರದಿದ್ದಲ್ಲಿ ಆ ಸಂಸ್ಥೆ ಮುಖ್ಯಸ್ಥರು ಹೊಣೆಗಾರರು, ಹಾಗೆಯೇ ಕಂಟೈನ್ ಮೆಂಟ್ ವಲಯಗಳಲ್ಲಿರುವ ಎಲ್ಲರೂ ಕೂಡಾ ಕಡ್ಡಾಯವಾಗಿ ಈ ಆಪ್ನ್ನು ಹೊಂದಿರಬೇಕು. ಸೋಮವಾರದಿಂದ ಕಚೇರಿ ಕಾರ್ಯಕ್ಕೆ ತೆರಳುವ ಯಾರೇ ಆದರೂ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ನ್ನು ಡೌನ್ ಲೋಡ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.