ಬೆಂಗಳೂರು, ಮೇ 03 (DaijiworldNews/PY) : ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು 3 ದಿನಗಳವರೆಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂದು ಸಿಎಂ ಬಿಎಸ್ವೈ ಅವರು ಸೂಚನೆ ನೀಡಿದ್ದಾರೆ.
ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಅತಂತ್ರ ಪರಿಸ್ಥಿತಿಯಲ್ಲಿರುವ ಪ್ರಯಾಣಿಕರಿಗೆ ತಮ್ಮ ಊರುಗಳಿಗೆ ತಲುಪುವಂತೆ ಅವಕಾಶ ನೀಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶದಂತೆ ರಾಜ್ಯದಲ್ಲಿಯೂ ಕೂಡಾ ಹೊರಜಿಲ್ಲೆಗಳಿಗೆ ಪ್ರಯಾಣಿಕರಿಗೆ ತೆರಳಲು ನಿಯಮಿತ ಅವಕಾಶ ಒದಗಿಸಿದ್ದು, ದುಬಾರಿ ಟಿಕೆಟ್ ದರ ನೀಡಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ, ಕಾರ್ಮಿಕರ ಬಳಿ ಹಣವಿಲ್ಲದ ಕಾರಣ, ಕೆಲವು ಪ್ರಯಾಣಿಕರು ಮೆಜೆಸ್ಟಿಕ್ನಲ್ಲಿಯೇ ಉಳಿಯಬೇಕಾಯಿತು. ಈ ಬಗ್ಗೆ ಮಾಧ್ಯಮದಲ್ಲಿಯೂ ಸುದ್ದಿಯಾಗಿತ್ತು.
ಇದನ್ನು ತಿಳಿದ ಸಿಎಂ ಬಿಎಸ್ವೈ ಅವರು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಉಳಿದಿದ್ದ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್ ಕರ್ನಾಟಕ ರಾಜ್ಯ ಸಮಿತಿಯು ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲೆಂದು ಒಂದು ಕೋಟಿ ರೂಪಾಯಿ ಚೆಕ್ ಮೂಲಕ ನೀಡಿದೆ.