ಬೆಂಗಳೂರು, ಮೇ 03 (Daijiworld News/MB) : ತಮ್ಮ ತಮ್ಮ ಊರಿಗೆ ತೆರಳಲು ಉಚಿತ ಪ್ರಯಾಣ ವ್ಯವಸ್ಥೆ ನಗರದಲ್ಲಿರುವ ವಲಸೆ ಕಾರ್ಮಿಕರಿಗೆ ಮಾತ್ರ ಮಾಡಲಾಗಿದ್ದು ಐಟಿಬಿಟಿ ವಲಯದ ಉದ್ಯೋಗಿಗಳಿಗಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರದಿಂದ ಮೂರು ದಿನಗಳ ಕಾಲ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಮಿಕರ ಬಳಿ ಉದ್ಯೋಗ ಕಾರ್ಡ್ ಇದ್ದು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಅದನ್ನು ಪರಿಶೀಲನೆ ನಡೆಸಿದ್ದಾರೆ. ಅವರು ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ಎಂದು ದೃಢವಾದ ಬಳಿಕ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಪ್ರಯಾಣಿಕರು ಗಾಬರಿಯಾಗಿ ಅವಸರ ಮಾಡಬಾರದು ಎಂದು ತಿಳಿಸಿದ್ದಾರೆ.
ಹಾಗೆಯೇ ಕಾರ್ಮಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಮಾತ್ರವಲ್ಲದೇ ಬೇರೆ ಕಡೆಗಳಲ್ಲಿಂದಲೂ ಕರೆದುಕೊಂಡು ಹೋಗಬೇಕೆಂದು ನಿರ್ಧರಿಸಲಾಗಿದೆ. ವಲಯಗಳಾಗಿ ವಿಂಗಡಿಸಿ ಅಲ್ಲಿನ ಬಸ್ ನಿಲ್ದಾಣಗಳಿಂದ ಕರೆದುಕೊಂಡು ಹೋಗಲಾಗುತ್ತದೆ. ಅವರ ಜಿಲ್ಲೆಗೆ ತಲುಪಿದ ಪ್ರಯಾಣಿಕರನ್ನು ಅಲ್ಲಿಂದ ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಕಾರ್ಮಿಕರ ಆರೋಗ್ಯ ತಪಾಸಣೆ ಬಳಿಕವೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.