ಚೆನ್ನೈ, ಮೇ 03 (DaijiworldNews/PY) : ಕೆಲಸ ಕಡಿಮೆ ಆಗಿದೆ ಎಂದು ಫುಡ್ ಡೆಲಿವೆರಿ ಯೋರ್ವ ಫುಡ್ ಬಾಕ್ಸ್ನಲ್ಲಿ ಗಾಂಜಾ ಸಾಗಾಟ ಮಾಡಿ ಸಿಕ್ಕಿಬಿದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.
ಗಾಂಜಾ ಸಾಗಾಟ ಮಾಡಿದ ಆರೋಪಿಯನ್ನು ತಮಿಳುನಾಡಿನ ಪೆರುಂಗುಡಿಯ ನಿವಾಸಿ ಗುಣಶೇಖರನ್(25) ಎಂದು ಗುರುತಿಸಲಾಗಿದೆ.
ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾತ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ಅಗತ್ಯವಾದ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸಲು ಮಾತ್ರವೇ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಆನ್ಲೈನ್ ಫುಡ್ ಡೆಲಿವೆರಿ ನೀಡುವ ಸೇವೆಯನ್ನು ಅಗತ್ಯವಾದ ಸೇವೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದನ್ನೆ ಲಾಭ ಎಂದು ತಿಳಿದುಕೊಂಡ ಫುಡ್ ಡೆಲಿವರಿ ಬಾಯ್ ಗುಣಶೇಖರನ್, ಫುಡ್ ಬಾಕ್ಸ್ನಲ್ಲಿ ಗಾಂಜಾ ಸಾಗಾಟ ಮಾಡುವ ಕೆಲಸ ಮಾಡಿದ್ದಾನೆ.
ಫುಡ್ ಡೆಲಿವರಿ ಬಾಯ್ ಬಳಿ ಇರುವ ಫುಡ್ ಬಾಕ್ಸ್ನಲ್ಲಿ ಫುಡ್ ಇರುತ್ತದೆ ಎಂದು ಪೊಲೀಸರು ಕೂಡಾ ತಪಾಸಣೆ ಮಾಡದೇ ಆತನನ್ನು ಹೋಗಲು ಬಿಡುತ್ತಿದ್ದರು. ಹಾಗಾಗಿ ಗುಣಶೇಖರನ್ ಗಾಂಜಾ ಬೇಕು ಎಂದು ಹಲವು ದಿನಗಳಿಂದ ಈತನಿಗೆ ಕರೆ ಮಾಡುವ ಗ್ರಾಹಕರ ಮನೆ ಬಾಗಿಲಿಗೆ ಡೆಲಿವರಿ ನೀಡುತ್ತಿದ್ದನು. ಈ ವಿಚಾರದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಡೆಲಿವರಿ ಬಾಯ್ ಅನ್ನು ಬಂಧಿಸಿ, ಆತನೊಂದಿಗಿದ್ದ 20 ಚಿಕ್ಕ ಚಿಕ್ಕ ಗಾಂಜಾ ಪ್ಯಾಕೆಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಆರೋಪಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಡೆಲಿವರಿ ಬಾಯ್ಯೋರ್ವ ಫುಡ್ ಡೆಲಿವರಿ ಮಾಡುವ ನೆಪದಲ್ಲಿ ಅಕ್ರಮವಾಗಿ ಗ್ರಾಹಕರಿಗೆ ಮದ್ಯ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.