ಬೆಳಗಾವಿ, ಮೇ 03 (DaijiworldNews/PY) : ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡ ಕಾರಣ ಮಹಾರಾಷ್ಟ್ರದಲ್ಲಿರುವ ಕಾರ್ಮಿಕರು ರಾಜ್ಯಕ್ಕೆ ಬರಲು ಅವಕಾಶವಿಲ್ಲ. ಹಾಗಾಗಿ ಅವರಿಗೆ ರೈಲು ಸೇವೆಯನ್ನು ಕಲ್ಪಿಸುವುದಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಇಲಾಖೆ ಆದೇಶ ನೀಡಿರುವ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ಅನುಮತಿ ನೀಡಿ ಕ್ರಮ ಕೈಗೊಳ್ಳಲಾಗಿದೆ. ವಲಸೆ ಕಾರ್ಮಿಕರನ್ನು ಅವರವರ ರಾಜ್ಯಕ್ಕೆ ರೈಲಿನಲ್ಲಿ ಕಳುಹಿಸಿ ಕೊಡಲಾಗುವುದು. ಇದರತ್ತ ಗಮನಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳೇ ನಡೆಸಬೇಕು. ರಾಜ್ಯಗಳೇ ಸಂಬಂಧಪಟ್ಟ ಪ್ರಯಾಣದ ವೆಚ್ಚವನ್ನು ಭರಿಸಬೇಕು. ಈಗಾಗಲೇ ರಾಜಸ್ಥಾನದಿಂದ ಸುಮಾರು 16 ಸಾವಿರ ಕಾರ್ಮಿಕರು ನೋಂದಣಿ ಮಾಡಿದ್ದಾರೆ. ರೈಲುಗಳನ್ನು ಬೇಡಿಕೆಯ ಅನುಸಾರವಾಗಿ ಓಡಿಸುತ್ತೇವೆ. ರೈಲು ಇಲಾಖೆಗೆ ನಮ್ಮ ರಾಜ್ಯ ಸರ್ಕಾರದಿಂದಲೂ ಪತ್ರ ಬಂದಿದೆ. ಕೇಂದ್ರ ಆರೋಗ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ತಂಡದವರು ಇದನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.