ಬೆಂಗಳೂರು, ಮೇ 03 (DaijiworldNews/PY) : ದುಬೈನಲ್ಲಿ ಸಂಕಷ್ಟಕ್ಕೊಳಗಾದ ಕನ್ನಡಿಗರನ್ನು ತವರಿಗೆ ಕರೆತರಲು ವಿಮಾನಯನ ಸೌಕರ್ಯ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದರೊಂದಿಗೆ, ಬಂದವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಭಾನುವಾರ ದುಬೈ ಕನ್ನಡಿಗರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಂವಾದ ನಡೆಸಿದ ಅವರು, ದುಬೈನಲ್ಲಿ ಸಂಕಷ್ಟಕ್ಕೊಳಗಾದ ಕನ್ನಡಿಗರಿಗೆ ಆಹಾರ, ಆರೋಗ್ಯ ಹಾಗೂ ಕಾನೂನು ಸೇವೆ ಒದಗಿಸಲು ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳು, ವೃತ್ತಿಪರರು ವೆಬ್ಸೈಟ್ ಆರಂಭಿಸಿ ನೆರವು ಒದಗಿಸುತ್ತಿರುವ ಬಗ್ಗೆ ಮೆಚ್ಚುಗ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಕಡೆಯಿಂದ ವಿದೇಶಗಳಿಂದ ಬರುವ 10-12 ಸಾವಿರ ಜನರಿಗೆ ಕ್ವಾರಂಟೈನ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ವಾಪಾಸ್ಸಾದವರ ಪೈಕಿ ಅಗತ್ಯವಿದ್ದವರಿಗೆ ವೃತ್ತಿಪರ ಕೌಶಲ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಉದ್ಯಮ ಆರಂಭಿಸಲು ಮುದ್ರಾ ಯೋಜನೆಯಡಿ ಅಗತ್ಯವಾದ ಹಣಕಾಸು ನೆರವು ಪಡೆಯಬಹುದು. ಅದರೊಂದಿಗೆ ಕೋರಿಕೆಯ ಮೇರೆಗೆ ನಿರ್ದಿಷ್ಟ ಸಿಬಿಎಸ್ಸಿ ಶಾಲೆಗಳಲ್ಲಿ ಅನಿವಾಸಿ ಭಾರತೀಯರ ಮಕ್ಕಳ ಪ್ರವೇಶಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅಗತ್ಯವಾದ ನೆರವು ಒದಗಿಸುವ ಬಗ್ಗೆ ಒತ್ತಾಯ ಮಾಡಲಾಗುತ್ತದೆ. ಅಂಥವರು ಭಾರತಕ್ಕೆ ವಾಪಾಸ್ಸಾಗಲು ಬಯಸಿದ್ದಲ್ಲಿಅವರಿಗೆ ಇಲ್ಲಿ ಸರ್ಕಾರವೇ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತದೆ. ವಿದೇಶಗಳಿಂದ ಬರುವವರನ್ನು ಹೊಟೇಲ್ಗಳಲ್ಲಿ ಪ್ರತ್ಯೇಕವಾಗಿರಿಸಿ, ಅಗತ್ಯವಾದ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.
ದುಬೈನಲ್ಲಿ ಸಂಕಷ್ಟಕ್ಕೊಳಗಾದ ಕನ್ನಡಿಗರ ನೆರವಿಗೆ ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ವೃತ್ತಿಪರರನ್ನೊಳಗೊಂಡ 20 ಜನರ ಸಮಾನ ಮನಸ್ಕರ ತಂಡವು ಕನ್ನಡಿಗ ಹೆಲ್ಪ್ ಲೈನ್-ವೆಬ್ಸೈಟ್ ಪ್ರಾರಂಭಿಸಿದ್ದು, ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡು ಸಹಾಯ ಯಾಚಿಸಿದವರಿಗೆ ಆಹಾರ ಕಿಟ್ಗಳನ್ನು, ಆರೋಗ್ಯ ಸಮಸ್ಯೆ ಇರುವವರಿಗೆ ಔಷಧ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗುತ್ತದೆ. ಅಲ್ಲದೇ, ಈ ಹೆಲ್ಫ್ಲೈನ್ ಕಾನೂನಿನ ಸಮಸ್ಯೆ ಇದ್ದವರ ಪರವಾಗಿಯೂ ನೆರವಾಗುತ್ತಿದೆ.