ಬೆಂಗಳೂರು, ಮೇ 03 (DaijiworldNews/SM): ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ರವಿವಾರದಂದು ಕೂಡ 13 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆಯಾಗಿದೆ.
ಈ ನಡುವೆ ರಾಜ್ಯದಲ್ಲಿ 25 ಮಂದಿ ಮೃತಪಟ್ಟಿದ್ದು 293 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರವಿವಾರದಂದು ಕಲಬುರಗಿಯಲ್ಲಿ ಆರು, ಬೆಂಗಳೂರು ನಗರ ಜಿಲ್ಲೆಯಲ್ಲಿ 4 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಕಲಬುರಗಿಯ 13 ವರ್ಷದ ಬಾಲಕಿಯಾಗಿದ್ದು, 532 ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.
ಇನ್ನು ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆಗೊಳಿಸಲಾಗುತ್ತಿದೆ. ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಮಾತ್ರವೇ ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ದಿನ ನಿತ್ಯ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಒಂದಿಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಜನ ಅಗತ್ಯ ಮುಂಜಾಗ್ರತೆ ವಹಿಸಿಕೊಂಡು ತಮ್ಮ ತಮ್ಮ ಕಾರ್ಯಗಳನ್ನು ನಡೆಸಬೇಕಾಗಿದೆ.