ಬೆಂಗಳೂರು, ಮೇ 04 (Daijiworld News/MSP): ದುಬೈನಲ್ಲಿ ಒಂದು ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ದುಬೈನಲ್ಲಿ ತೊಂದರೆಗೆ ಸಿಲುಕಿರುವ ಕನ್ನಡಿಗರು ಭಾರತಕ್ಕೆ ಮರಳಲು ಸೂಕ್ತ ವಿಮಾನಯಾನ ಸೌಕರ್ಯ ಅಗತ್ಯವಿದೆ. ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಗೃಹ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರದ ವತಿಯಿಂದ ಮನವಿ ಮಾಡಲಾಗುವುದು. ಕರ್ನಾಟಕ ಸರಕಾರವೂ ದುಬೈ ಕನ್ನಡಿಗರ ಏರ್ ಲಿಫ್ಟ್ ಗೆ ಸಿದ್ಧವಿದೆ ಎಂದು ಡಿಸಿಎಂ ಡಾ. ಅಶ್ವತ್ಥನಾರಾಯಣ ದುಬೈ ಕನ್ನಡಿಗರೊಂದಿಗೆ ಸಂವಾದ ನಡೆಸಿ ಭರವಸೆ ನೀಡಿದರು.
ದುಬೈ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು , ವಿದೇಶದಿಂದ ಕರ್ನಾಟಕಕ್ಕೆ ಬಂದವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
"ದುಬೈನಲ್ಲಿ ಈಗಾಗಲೇ ಸುಮಾರು 20 ಸಾವಿರ ಮಂದಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡಿಗ ಹೆಲ್ಪ್ಲೈನ್ ಮೂಲಕ ಕಳೆದ 20 ದಿನಗಳಿಂದ ಅಸಹಾಯಕರಿಗೆ ನೆರವು ಒದಗಿಸಲಾಗುತ್ತಿದೆ . ಪ್ರವಾಸಿ ವೀಸಾದಲ್ಲಿ ಬಂದಿರುವ 270 ಮಂದಿಗೆ ಉದ್ಯೋಗ, ಆಶ್ರಯ ಇಲ್ಲ ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದು ಎಂದು ದುಬೈ ಕನ್ನಡಿಕರ ಪರವಾಗಿ ಉದ್ಯಮಿ ಪ್ರವೀಣ್ ಶೆಟ್ಟಿ , ಡಿಸಿಎಂ ಅವರಿಗೆ ಮನವಿ ಮಾಡಿದರು.
ಇವರಲ್ಲದೇ ವೀಡಿಯೋ ಸಂವಾದದಲ್ಲಿ ಕೆಎನ್ಆರ್ಐ ಅಧ್ಯಕ್ಷರೂ ಆಗಿರುವ ಉದ್ಯಮಿ ಪ್ರವೀಣ್ ಶೆಟ್ಟಿ, ಅನಿವಾಸಿ ಕನ್ನಡಿಗರು ದುಬೈನ ಅಧ್ಯಕ್ಷ ಮೊಹಮ್ಮದ್ ನವೀದ್, ದುಬೈನಲ್ಲಿ ಉದ್ಯಮ ನಡೆಸುತ್ತಿರುವ ಕನ್ನಡ ಸಿನಿಮಾ ನಿರ್ಮಾಪಕ ಹರೀಶ್ ಶೇರಿಗಾರ್, ತುಳು ರಕ್ಷಣಾ ವೇದಿಕೆಯ ಹಿದಾಯತ್ ಅಡ್ಡೂರು, ಕಾನೂನು ಸಲಹೆಗಾರ ಸುನೀಲ್ ಅಂಬಳತರೆ, ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಲಿಂಗದಹಳ್ಳಿ, ಮೀಡಿಯಾ ಫೋರಂನ ಇಮ್ರಾನ್ ಖಾನ್, ಕನ್ನಡ ಶಿಕ್ಷಕ ಶಶಿಧರ್ ನಾಗರಾಜಪ್ಪ, ಉದ್ಯಮಿ ರೊನಾಲ್ಡ್ ಮಾರ್ಟಿಸ್, ದುಬೈ ಕರ್ನಾಟಕ ಸಂಘದ ದಯಾ ಕಿರೋಡಿಯನ್, ಉದ್ಯಮಿಗಳಾದ ನೊಯಲ್ ಅಲ್ಮೇಡಾ, ಯಶ್ವಂತ್ ಕರ್ಕೇರ, ಅಶ್ಫಕ್ ಸದ, ಯೂಸುಫ್ ಬೆರ್ಮವೆರ್, ಅಫ್ಜಲ್ ಎಸ್.ಎಂ ಪಾಲ್ಗೊಂಡಿದ್ದರು.