ನವದೆಹಲಿ, ಮೇ 04 (Daijiworld News/MB) : ಲಾಕ್ಡೌನ್ನಲ್ಲಿ ಬೇರೆ ಕಡೆ ಸಿಲುಕಿದ್ದ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ಅನುಮತಿ ನೀಡಲಾಗಿದ್ದು ಅವರ ರೈಲು ಟಿಕೆಟ್ ಶುಲ್ಕ ಅವರೇ ಪಾವತಿ ಮಾಡಬೇಕೆಂದು ಸರ್ಕಾರ ಹೇಳಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲಾ ಕಾರ್ಮಿಕರ ರೈಲು ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ನೀಡುತ್ತದೆ ಎಂದು ಘೋಷಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಕಷ್ಟಕರವಾದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ವಲಸೆ ಕಾರ್ಮಿಕರಿಗೆ ರೈಲು ಟಿಕೆಟ್ಗಾಗಿ ಶುಲ್ಕ ಪಾವತಿಸಲು ಹೇಳಿರುವುದು ಖೇಧಕರ, ಹಾಗಾದ್ದಲ್ಲಿ ನಮ್ಮ ಸರ್ಕಾರಕ್ಕೆ ಯಾವ ಜವಾಬ್ದಾರಿ ಇದೆ? ಎಂದು ಪ್ರಶ್ನಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಮನೆಗಳಿಗೆ ತೆರಳಲಾಗದೆ ಸಂಕಷ್ಟದಲ್ಲಿದ್ದಾರೆ. ಅವರಿಗೆ ಈಗ ತಮ್ಮ ಕುಟುಂಬವನ್ನು ಸೇರಬೇಕಿದೆ. ಆದರೆ ಪ್ರಯಾಣ ಮಾಡಲು ಅವರಲ್ಲಿ ಹಣವಿಲ್ಲ, ಸರ್ಕಾರವೂ ಉಚಿತ ವ್ಯವಸ್ಥೆ ನೀಡಿಲ್ಲ. ನಮ್ಮ ಕಾರ್ಮಿಕರು ನಮ್ಮ ಆರ್ಥಿಕತೆಯ ಬೆನ್ನೆಲುಬು ಮತ್ತು ನಮ್ಮ ರಾಷ್ಟ್ರದ ಬೆಳವಣಿಗೆಯ ರಾಯಭಾರಿಗಳು. ಕೇವಲ ನಾಲ್ಕು ಗಂಟೆಗಳ ಮುನ್ನ ಲಾಕ್ಡೌನ್ ಬಗ್ಗೆ ನೋಟಿಸ್ ನೀಡಿದ್ದು ಕಾರ್ಮಿಕರು ಅವರ ಮನೆಗೆ ಮರಳುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ದೂರಿದರು.
ಇನ್ನು ಈ ಸಂದರ್ಭದಲ್ಲಿ ಫೆಬ್ರವರಿ 24 ರಂದು ಅಹಮದಾಬಾದ್ನಲ್ಲಿ ನಡೆದ "ನಮಸ್ತೆ ಟ್ರಂಪ್" ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು ಸರ್ಕಾರ ಗುಜರಾತ್ನಲ್ಲಿ ಕೇವಲ ಒಂದು ಸಾರ್ವಜನಿಕ ಕಾರ್ಯಕ್ರಮದ ಸಾರಿಗೆ ಮತ್ತು ಆಹಾರಕ್ಕಾಗಿ ಸುಮಾರು ₹100 ಕೋಟಿ ಖರ್ಚು ಮಾಡಿದೆ, ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಉಚಿತ ವಿಮಾನ ಪ್ರಯಾಣ ಒದಗಿಸುತ್ತದೆ. ಆದರೆ ಈ ತೀವ್ರ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ರೈಲ್ವೆ ಸಚಿವಾಲಯವು ಉಚಿತ ರೈಲು ಪ್ರಯಾಣವನ್ನು ಯಾಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
1947ರ ವಿಭಜನೆಯ ಬಳಿಕ ಇದೇ ಮೊದಲ ಬಾರಿಗೆ ಭಾತರದಲ್ಲಿ ಇಷ್ಟು ದೊಡ್ಡ ಸಂಕಷ್ಟ ಉಂಟಾಗಿದೆ. ಯಾಕೆಂದರೆ ಈಗ ಸಾವಿರಾರು ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ಆಹಾರ, ಔಷಧಿ, ಹಣ, ಸಾರಿಗೆ ವ್ಯವಸ್ಥೆಯಿಲ್ಲದೆ ತಮ್ಮ ಕುಟುಂಬ ಸೇರಲು ಕಾಲ್ನಡಿಗೆಯಲ್ಲಿ ನೂರು ಕಿ.ಮೀವರೆಗೆ ನಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಲಾಕ್ಡೌನ್ ಆರಂಭವಾಗುವಾಗಲೇ ಕಾಂಗ್ರೆಸ್ ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ತಮ್ಮ ಊರಿಗೆ ಮರಳಲು ಸುರಕ್ಷಿತವಾದ ಉಚಿತ ರೈಲು ಪ್ರಯಾಣವನ್ನು ಒದಗಿಸಬೇಕೆಂದು ಮನವಿ ಮಾಡಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಎಲ್ಲಾ ರಾಜ್ಯ ಘಟಕಗಳು ಕಾರ್ಮಿಕ ಮತ್ತು ವಲಸೆ ಕಾರ್ಮಿಕರ ರೈಲು ಪ್ರಯಾಣದ ವೆಚ್ಚವನ್ನು ಭರಿಸುತ್ತದೆ. ಇದು ನಮ್ಮ ದೇಶವಾಸಿಗಳ ಸೇವೆಗಾಗಿ ಕಾಂಗ್ರೆಸ್ನ ಕೊಡುಗೆ, ಕಾಂಗ್ರೆಸ್ ಎಂದಿಗೂ ಅವರಿಗೆ ಹೆಗಲಾಗಿ ನಿಲ್ಲುತ್ತದೆ ಎಂದು ಹೇಳಿದರು.