ಜಾರ್ಖಂಡ್, ಮೇ 04 (Daijiworld News/MSP): ಇಂದಿನಿಂದ ದೇಶಾದ್ಯಂತ ಲಾಕ್ಡೌನ್ ಮೂರನೇ ಹಂತದಲ್ಲಿ ವಿಸ್ತರಣೆಯಾಗುತ್ತಿದೆ. ರೆಡ್ ಜೋನ್, ಗ್ರೀನ್ ಜೋನ್, ಆರೆಂಜ್ ಜೋನ್ ಎಂದು ವಲಯಗಳಾಗಿ ಗುರುತಿಸಿರುವ ಕೇಂದ್ರ ಸರ್ಕಾರ ಇದರ ಅನ್ವಯ ಹಲವು ವಿಚಾರದಲ್ಲಿ ವ್ಯಾಪಾರ ವಹಿವಾಟು ವಿನಾಯಿತಿ ನೀಡಿದೆ.
ಹೀಗಾಗಿ ಹಲವು ರಾಜ್ಯಗಳಲ್ಲಿ ವ್ಯಾಪಾರ ಚಟುವಟಿಕೆ ಗರಿಕೆದರಿದೆ. ಆದರೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಂಡಿರುವ ಜಾರ್ಖಂಡ್ ಸರ್ಕಾರ, ಕೇಂದ್ರದ ವಿನಾಯಿತಿ ನಮ್ಮ ರಾಜ್ಯಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿ ಕಠಿಣ ಲಾಕ್ ಡೌನ್ ಮುಂದಿನ ಎರಡುವಾರಗಳ ಕಾಲ ಜಾರಿಗೊಳಿಸಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಕುರಿತು ಹೇಳಿಕೆ ನೀಡಿದ್ದು, ಕೇಂದ್ರದ ಮಾರ್ಗಸೂಚಿ ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲಾಗುವುದಿಲ್ಲ. ಜಾರ್ಖಂಡದಲ್ಲಿ ಇನ್ನು ಎರಡು ವಾರಗಳು ಕಾಲ ಲಾಕ್ಡೌನ್ ಮುಂದುವರಿಯಲಿದೆ. ರಾಜ್ಯಗಳಿಗೆ ಸಹೋದರ, ಸಹೋದರಿಯರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ವ್ಯಕ್ತಿಗಳು ಹಿಂತಿರುಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮೂರು ವಲಯಗಳಲ್ಲಿಯೂ ವಿನಾಯಿತಿ ಇಲ್ಲ. ಈಗಿರುವಂತೆ ಲಾಕ್ಡೌನ್ ಮುಂದುವರಿಯಲಿದೆ. ಅಂಗಡಿ, ಉದ್ಯಮ, ಕೈಗಾರಿಕೆ, ಪ್ರಯಾಣ, ಮದ್ಯ ಮಾರಾಟ ಯಾವುದಕ್ಕೂ ವಿನಾಯಿತಿ ಇಲ್ಲ ಎಂದಿದ್ದಾರೆ.
ಜಾರ್ಖಂಡ್ ನಲ್ಲಿ ಸುಮಾರು 115 ಕೊರೊನಾ ಸೋಂಕಿತರು ಮಾತ್ರ ವರದಿಯಾಗಿದ್ದಾರೆ. ಈ ಪೈಕಿ 95 ಜನರು ಸಕ್ರಿಯರಾಗಿದ್ದಾರೆ. 22 ಜನರು ಚೇತರಿಸಿಕೊಂಡಿದ್ದು, 3 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.