ನವದೆಹಲಿ, ಮೇ 04 (DaijiworldNews/PY) : ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿ ವರದಿಯಾಗಿರುವ 20 ಜಿಲ್ಲೆಗಳಿಗೆ ಅಧ್ಯಯನ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಈಗಾಗಲೇ 20 ತಂಡಗಳನ್ನು ರಚನೆ ಮಾಡಿ ವಿವಿಧ ಜಿಲ್ಲೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ.
ದೆಹಲಿಯೂ ಸೇರಿದಂತೆ ಒಂಭತ್ತು ರಾಜ್ಯಗಳಲ್ಲಿ ಈ 20 ಜಿಲ್ಲೆಗಳಿದ್ದು, ಕ್ಲಸ್ಟರ್ ಕಂಟೈನ್ಮೆಂಟ್ ಯೋಜನೆಯನ್ನು ಸೂಕ್ತವಾದ ರೀತಿಯಲ್ಲಿ ಜಾರಿಗೆ ತರುವುದು ಹಾಗೂ ಕಣ್ಗಾವಳು ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುವುದು ಈ ತಂಡದ ಮೂಖ್ಯ ಉದ್ದೇಶವಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೆಹಲಿಯ ಆಗ್ನೇಯ ಹಾಗೂ ಕೇಂದ್ರ ಜಿಲ್ಲೆ, ಸೂರತ್ ಹಾಗೂ ವಡೋದರ, ಗಂಟೂರ್ ಹಾಗೂ ಕೃಷ್ಣ, ಮಹಾರಾಷ್ಟ್ರದ ಮುಂಬೈ, ಪಶ್ಚಿಮ ಬಂಗಾಳದ ಕೊಲ್ಕತ್ತಾ ಹಾಗೂ ಆಂಧ್ರ ಪ್ರದೇಶದ ಕರ್ನೂಲ್, ಥಾಣೆ ಹಾಗೂ ಪುಣೆ, ತಮಿಳುನಾಡಿನ ಚೆನ್ನೈ, ಗುಜರಾತ್ನ ಅಹ್ಮದಾಬಾದ್, ತೆಲಂಗಾಣದ ಹೈದರಾಬಾದ್, ರಾಜಸ್ಥಾನದ ಜೈಪುರ ಹಾಗೂ ಜೋಧ್ಪುರ, ಉತ್ತರ ಪ್ರದೇಶದ ಆಗ್ರಾ ಹಾಗೂ ಲಕ್ನೋ ಅತ್ಯಂತ ತೀವ್ರ ಸೋಂಕುಪೀಡಿತ 20 ಜಿಲ್ಲೆಗಳಾಗಿವೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಎಐಐಎಂಎಸ್, ಜೆಐಐಪಿಎಂಇಆರ್ ಹಾಗೂ ರಾಷ್ಟ್ರೀಯ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಯ ತಜ್ಞರು ಈ ತಂಡದಲ್ಲಿ ಇರುತ್ತಾರೆ. ಅಲ್ಲದೇ, ಈ ತಂಡಗಳು ಆಯಾ ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಅಥವಾ ಮುಖ್ಯ ಕಾರ್ಯದರ್ಶಿಗಳಿಗೆ ವರದಿಯನ್ನು ಸಲ್ಲಿಸುತ್ತವೆ. ತಜ್ಞರ ಅಭಿಪ್ರಾಯ, ಸುಧಾರಣೆಯಾಗಬೇಕಾದ ಕ್ಷೇತ್ರದ ವಿವರ ಹಾಗೂ ಶಿಫಾರಸುಗಳು ಈ ತಂಡದಲ್ಲಿ ಇರುತ್ತವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.