ಬೆಂಗಳೂರು, ಮೇ 04 (DaijiworldNews/PY) : ವಲಸೆ ಕಾರ್ಮಿಕರಿಗೆ ಕಲ್ಪಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಈ ಸೌಲಭ್ಯವು ಮಂಗಳವಾರ ಕೊನೆಗೊಳ್ಳುವುದಿತ್ತು. ಆದರೆ, ಕಾರ್ಮಿಕರ ಹಾಗೂ ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಣೆ ಮಾಡಲಾಗಿದ್ದು, ಬಸ್ ನಿಲ್ದಾಣಗಳಲ್ಲಿ ಕಾರ್ಮಿಕರು ಹಾಗೂ ಇತರೆ ಜನರು ಜಮಾವಣೆಯಾಗದೇ ತಮ್ಮ ಊರುಗಳಿಗೆ ನೆಮ್ಮದಿಯಿಂದ ತೆರಳಬೇಕು ಎಂದು ಸಿಎಂ ಅವರು ಮನವಿ ಮಾಡಿದ್ದಾರೆ.
ಮೇ.3 ಭಾನುವಾರದಂದು 951 ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ಒದಗಿಸಲಾಗಿದ್ದು, ತಮ್ಮ ಊರುಗಳಿಗೆ ಅಂದಾಜು 30 ಸಾವಿರ ಜನರು ಪ್ರಯಾಣ ಮಾಡಿದ್ದಾರೆ. ಸೋಮವಾರ ಈಗಾಗಲೇ 50 ಬಸ್ಸುಗಳಲ್ಲಿ ಸುಮಾರು 1,500 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಸೌಲಭ್ಯಕ್ಕಾಗಿ ಬೆಂಗಳೂರಿನಲ್ಲಿ 550 ಬಸ್ಸುಗಳನ್ನು ಹಾಗೂ 400 ಬಸ್ಸುಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಕಾಯ್ದಿರಿಸಲಾಗಿದೆ. ಶನಿವಾರ ಕೂಡಾ 550,ಬಸ್ಗಳಲ್ಲಿ ಅಂದಾಜು ರಾಜ್ಯದ ವಿವಿಧ ನಗರಗಳಲ್ಲಿ ತಮ್ಮ ಊರುಗಳಿಗೆ ತೆರಳಿದ್ದಾರೆ.
ಮೇ.3 ಭಾನುವಾರದಂದು ಎರಡು ರೈಲುಗಳು ಬಿಹಾರದ ಪಾಟ್ನಾ ಒಂದು ಜಾರ್ಖಂಡ್ ರಾಂಚಿಗೆ ತೆರಳಿವೆ. ಈ ಸಂದರ್ಭ ಒಡಿಸ್ಸಾದ ಭುವನೇಶ್ವರಕ್ಕೆ ಒಂದು ರೈಲು ಸೇರಿದಂತೆ ನಾಲ್ಕು ರೈಲುಗಳಲ್ಲಿ 4,800 ಪ್ರಯಾಣಿಕರನ್ನು ಕಳುಹಿಸಲಾಗಿದೆ. ಸೋಮವಾರ ರಾಜಸ್ಥಾನದ ಜೈಪುರ್ ಮತ್ತು ಬಿಹಾರದ ಪಾಟ್ನಾಕ್ಕೆ ಎರಡು ರೈಲುಗಳು ಹೊರಡಲಿವೆ. ಎಲ್ಲಾ ಜನರಿಗೂ ಪ್ರಯಾಣಕ್ಕೂ ಮುನ್ನ ಉಚಿತ ಊಟ ಹಾಗೂ ನೀರಿ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.