ಹಾವೇರಿ, ಮೇ 04 (Daijiworld News/MSP): ಹಾವೇರಿಯಲ್ಲಿ ಇದೇ ಮೊದಲ ಕೊರೊನಾ ಕೇಸ್ ಪತ್ತೆಯಾಗಿದೆ. ಯಾವುದೇ ಸೋಂಕು ಪ್ರಕರಣಗಳಿಲ್ಲದೇ ಗ್ರೀನ್ ಝೋನ್ ನಲ್ಲಿದ್ದ ಹಾವೇರಿ ಜನತೆಗೆ ಈ ವಿಚಾರ ನಿದ್ದೆಗೆಡಿಸಿದೆ.
ಮಹಾರಾಷ್ಟ್ರದ ಮುಂಬೈಯಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಏಪ್ರಿಲ್ 29 ರಂದು ಜಿಲ್ಲೆಗೆ ಆಗಮಿಸಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ. ಇನ್ನಿಬ್ಬರ ಪರೀಕ್ಷೆ ನಡೆದಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಯು ತನ್ನಅಣ್ಣ ಮತ್ತು ಮಗನೊಂದಿಗೆ ಮುಂಬೈಯಿಂದ ಟ್ರಕ್ ಮೂಲಕ ಪುಣೆಗೆ ಬಂದಿದ್ದ. ನಂತರ ಮೂವರು ಏ. 29 ಕ್ಕೆ ಪುಣೆಯಿಂದ ಹಾವೇರಿಯ ಸವಣೂರಿನ ತಮ್ಮ ಮನೆಗೆ ತೆರಳಿದ್ದರು.ಆದರೆ ಈ ವ್ಯಕ್ತಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆತನಿಗೆ ಉಸಿರಾಟದ ಸಮಸ್ಯೆಯೂ ಇರಲಿಲ್ಲ. ಮುಂಬೈನಿಂದ ಬಂದಿದ್ದ ಎಂಬ ಕಾರಣಕ್ಕೆ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಕೊರೊನಾ ವೈರಸ್ ಇರುವುದು ದೃಢವಾಗಿದೆ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ, 642 ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಹೊಸ 28 ಪ್ರಕರಣ ಪತ್ತೆಯಾಗಿದೆ. ಈ ಪೈಕಿ 21 ಪ್ರಕರಣಗಳು ದಾವಣಗೆರೆ, ಮಂಡ್ಯ, ಕಲಬುರ್ಗಿ ತಲಾ 2, ವಿಜಯಪುರ, ಹಾವೇರಿ, ಚಿಕ್ಕಬಳ್ಳಾಪುರ ತಲಾ 1 ಪ್ರಕರಣ ಪತ್ತೆಯಾಗಿದೆ.
ಕಲಬುರ್ಗಿಯಲ್ಲಿ 56 ವರ್ಷದ ಶಿಕ್ಷಕ ಕೊರೊನಾಗೆ ಬಲಿಯಾಗಿದ್ದು, ಈವರೆಗೆ ಕಲಬುರ್ಗಿಯಲ್ಲಿ 6 ಮಂದಿ ಸೋಂಕಿಗೆ ಮೃತಪಟ್ಟರೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ