ಪಟ್ನಾ, ಮೇ 04 (Daijiworld News/MB) : ಸಾಲ ಮರು ಪಾವತಿಸಲು ಸಾಧ್ಯವಾಗದೆ, ಅದೇ ವಿಷಯದಲ್ಲಿ ಪತಿ ಪತ್ನಿ ನಡುವೆ ವಾಗ್ವಾದ ನಡೆದು ಪತಿ ಪತ್ನಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
35ರ ಹರೆಯದ ರಮೇಶ್ ಶಾ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇವರ ಪತ್ನಿ ಸುಮನ್ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ್ ಶಾ ಅವರು ಟ್ರಕ್ ಖರೀದಿಗಾಗಿ 5 ಲಕ್ಷ ಸಾಲ ಪಡೆದುಕೊಂಡಿದ್ದು ಈ ಟ್ರಕ್ನ ದುಡಿಮೆಯಿಂದಲ್ಲೇ ಸಾಲದ ಕಂತು ಪಾವತಿಸುತ್ತಿದ್ದರು. ಲಾಕ್ಡೌನ್ ಆದ ಬಳಿಕ ದುಡಿಮೆ ಇಲ್ಲದ ಕಾರಣ ಸಾಲದ ಹೊರೆ ಜಾಸ್ತಿಯಾಗಿದ್ದು ಈ ವಿಚಾರದಲ್ಲಿ ಸುಮನ್ ಮತ್ತು ರಮೇಶ್ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಸುಮನ್ ಬೆಂಕಿ ಹಚ್ಚಿಕೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬೆಂಕಿ ತಗಲಿ ಶೇ.90ರಷ್ಟು ದೇಹ ಸುಟ್ಟಿದ್ದು ಸುಮನ್ ಮೃತಪಟ್ಟಿದ್ದಾರೆ, ಇದರಿಂದಾಗಿ ನೊಂದು ಕೊಂಡ ಪತಿ ರಮೇಶ್ ಶಾ ನೇಣಿಗೆ ಶರಣಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸಾಲ ಮರು ಪಾವತಿ ವಿಷಯದಲ್ಲಿ ಈ ದಂಪತಿ ನಡುವೆ ವಾಗ್ವಾದವಾಗಿದ್ದು ಇಬ್ಬರೂ ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸರೈ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಸುನೀತಾ ಕುಮಾರಿ ಹೇಳಿದ್ದಾರೆ