ಬೆಂಗಳೂರು, ಮೇ 04 (DaijiworldNews/PY) : ಇಂದು ಮುಂಜಾನೆ ರೌಡಿ ಬಿಜ್ಜು ಹತ್ಯೆಗೆ ಸಂಬಂಧಿಸಿದಂತೆ ಕೆಜಿಹಳ್ಳಿ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದ ಸಂದರ್ಭ ಪೊಲೀಸರ ಮೇಲೆಯೇ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಆರೋಪಿ ಹಳೆ ಬಾಗಲೂರು ಲೇಔಟ್ ನಿವಾಸಿ ಆಂಡ್ರೋ ಅಲಿಯಾಸ್ ಸಂಜಯ್ (19) ಪೊಲೀಸರ ಗುಂಡೇಟಿಗೆ ಗಾಯಗೊಂಡಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಲಾಕ್ಡೌನ್ ಮಧ್ಯೆಯೂ ಹಳೆ ದ್ವೇಷದ ಹಿನ್ನೆಲೆ ಬಾಗಲೂರು ಲೇಔಟ್ನಲ್ಲಿ ರೌಡಿ ಮರಿಯಾ ದಿಲೀಪ್ ಅಲಿಯಾಸ್ ಬಿಜ್ಜು(39) ಎಂಬಾತನನ್ನು ಮೊನ್ನೆ ರಾತ್ರಿ ಸುಮಾರು 7.20ರ ವೇಳೆಗೆ ದುಷ್ಕರ್ಮಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಜಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂದಡಿದ್ದು, ಆರೋಪಿಗಳ ಪತ್ತೆಗಾಗಿ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ತಂಡವನ್ನು ರಚಿಸಿದ್ದರು.
ಈ ತಂಡ ಪ್ರಕರಣದ ಆರೋಪಿ ವೇಲುನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಸಂಜಯ್ ಅಲಿಯಾಸ್ ಆಂಡ್ರೋ, ಸ್ಟಾಲಿನ್, ಶಶಿ, ಆಗಸ್ಟೀನ್ ಲಿಡ್ಕರ್ ಕಾಲೀನಿಯಲ್ಲಿರುವ ಬಗ್ಗೆ ಮಾಹಿತಿ ದೊರೆತಿದ್ದು, ಕೂಡಲೇ ಕೆಜಿಹಳ್ಳಿ ಠಾಣೆ ಇನ್ಸ್ಪೆಕ್ಟರ್ ಅಜಯ್ ಸಾರಥಿ, ಪಿ.ಎಸ್.ರಾಜೇಶ್, ಹೆಡ್ಕಾನ್ಸ್ಟೆಬಲ್ಗಳಾದ ಶ್ರೀನಿವಾಸಮೂರ್ತಿ, ಸಿದ್ದಲಿಂಗಸ್ವಾಮಿ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸಲು ಬೆಳಗ್ಗೆ 6 ಗಂಟೆ ಸುಮಾರಿಗೆ ಆರೋಪಿಗಳು ಇರುವ ಸ್ಥಳಕ್ಕೆ ತೆರಳಿದ್ದಾರೆ.
ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಕೂಡಲೇ ಪೊಲೀಸರ ಮೇಲೆ ಖಾರದಪುಡಿ ಎರಚಿ, ಚಾಕುವಿನಿಂದ ಹತ್ಯೆ ಮಾಡಲು ಮುಂದಾಗಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಅಜಯ್ ಸಾರಥಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗಲು ಸೂಚಿಸಿದ್ದಾರೆ. ಆದರೆವ ಪೊಲೀಸರ ಮಾತನ್ನು ಲೆಕ್ಕಿಸದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಸಂದರ್ಭ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಹಾರಿಸಿದ ಗುಂಡು ಆಂಡ್ರೋ ಎಡಗಾಲಿಗೆ ತಗುಲಿದ್ದು, ಗುಂಡೇಟು ತಗುಲಿ ಕುಸಿದು ಬಿದ್ದ ಆರೋಪಿಯನ್ನು ಪೊಲೀಸರು ಸುತ್ತುವರೆದು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕೆ ಚಿಕಿತ್ಸೆಗಾಗಿ ಆಸ್ಪತ್ರೆಗ ದಾಖಲಿಸಿದ್ದಾರೆ. ಆದರೆ, ಕಾರ್ಯಾಚರಣೆಯ ವೇಳೆ ಉಳಿದ ಮೂರೂ ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿ ಆಂಡ್ರೋನನ್ನು ವಿಚಾರಣೆ ನಡೆಸಿದ ಸಂದರ್ಭ ಆತ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದುಮ ತನ್ನ ದೊಡ್ಡಪ್ಪ ಡ್ಯಾನಿಯಲ್ನನ್ನು ಮರಿಯಾ ದಿಲೀಪ್ ಅಲಿಯಾಸ್ ಬಿಜ್ಜು ಹಾಗೂ ಆತನ ಸಹೋದರರು ಸೇರಿ ಹತ್ಯೆ ಮಾಡಿದ್ದರು. ಜೆಜೆ ಹಾಗಾಗಿ ಬಿಜ್ಜು ಹತ್ಯೆಗಾಗಿ ಹಲವು ದಿನಗಳಿಂದ ಸಂಚು ನಡೆಸಿದ್ದೆವು. ಶನಿವಾರ ಸಂಜೆ ಸಹಚರರೊಂದಿಗೆ ಆತನನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.
ಕಾರ್ಯಾಚರಣೆಯ ಸಂದರ್ಭ ಗಾಯಗೊಂಡಿರುವ ಹೆಡ್ಕಾನ್ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದಿರುವ ಎರಡೇ ದಿನದಲ್ಲಿ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೂರ್ವ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ಆರೋಪಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.