ನವದೆಹಲಿ, ಮೇ 04 (Daijiworld News/MB) : ಲಾಕ್ಡೌನ್ ಕಾರಣ ಬೇರೆ ಕಡೆಗಳಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕರೆದೊಯ್ಯಲು ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿರುವ ವಿಶೇಷ ರೈಲುಗಳ ಟಿಕೆಟ್ ದರದಲ್ಲಿ ಶೇಕಡಾ 85ರಷ್ಟು ರಿಯಾಯಿತಿ ನೀಡಲಾಗಿದೆ. ಉಳಿದ ಶೇಕಡಾ 15 ರಷ್ಟನ್ನು ರಾಜ್ಯ ಸರ್ಕಾರಗಳು ಭರಿಸಲಿದೆ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿ ಭಾರತೀಯ ಜನತಾ ಪಾರ್ಟಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪತ್ರ, ರಾಹುಲ್ ಗಾಂಧಿಯವರೆ ರೈಲ್ವೇ ನಿಲ್ದಾಣಗಳಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಎಂಬ ಮಾಹಿತಿಯನ್ನು ನಾನು ಲಗತ್ತಿಸಿದ್ದೇನೆ. ರೈಲ್ವೇ ಇಲಾಖೆಯು ರೈಲುಗಳ ಟಿಕೆಟ್ ದರದಲ್ಲಿ ಶೇಕಡಾ 85ರಷ್ಟು ರಿಯಾಯಿತಿ ನೀಡಿದೆ. ಉಳಿದ ಶೇಕಡಾ 15 ರಷ್ಟನ್ನು ರಾಜ್ಯ ಸರ್ಕಾರಗಳು ಭರಿಸುತ್ತದೆ. ಮಧ್ಯಪ್ರದೇಶ ಸರ್ಕಾರ ಭರಿಸುತ್ತದೆ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳೂ ಕೂಡಾ ಇದೇ ಕ್ರಮ ಪಾಲಿಸುವಂತೆ ಹೇಳಿ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಮಾಡಿ, ಪಿಯೂಷ್ ಅವರ ರೈಲ್ವೇ ಇಲಾಖೆಯನ್ನು ಸಂಪರ್ಕಿಸಿದೆ. ರೈಲ್ವೇ ಇಲಾಖೆಯು ರೈಲುಗಳ ಟಿಕೆಟ್ ದರದಲ್ಲಿ ಶೇಕಡಾ 85 ರಷ್ಟು, ರಾಜ್ಯ ಸರ್ಕಾರ ಶೇಕಡಾ 15 ರಷ್ಟನ್ನು ಪಾವತಿಸುತ್ತದೆ. ವಲಸೆ ಕಾರ್ಮಿಕರು ಉಚಿತವಾಗಿ ಪ್ರಯಾಣ ಮಾಡಬಹುದು. ಈ ಬಗ್ಗೆ ಇಲಾಖೆಯೂ ಅಧಿಕೃತ ಪ್ರಕಟನೆ ಮೂಲಕ ಸ್ಪಷ್ಟ ಪಡಿಸಲಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ವಲಸೆ ಕಾರ್ಮಿಕರು ತಮ್ಮ ಪ್ರಯಾಣದ ವೆಚ್ಚವನ್ನು ತಾವೇ ಭರಿಸಬೇಕು ಎಂದು ಸರ್ಕಾರ ಹೇಳಿದ್ದು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಲಸೆ ಕಾರ್ಮಿಕ ಪ್ರಯಾಣದ ವೆಚ್ಚವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಭರಿಸಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಕೇರ್ ನಿಧಿಗೆ 151 ಕೋಟಿ ರೂಪಾಯಿ ನೀಡಿರುವ ರೈಲ್ವೇ ಇಲಾಖೆ ವಲಸೆ ಕಾರ್ಮಿಕರಿಂದ ಪ್ರಯಾಣ ದರ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದರು.