ನವದೆಹಲಿ, ಮೇ 04 (Daijiworld News/MB) : ಪಾಕಿಸ್ತಾನ ಜಮ್ಮು ಕಾಶ್ಮೀರದಲ್ಲಿ ಅತಿಕ್ರಮಣ ಮಾಡಿರುವ ಪ್ರದೇಶಗಳಿಂದ ಕೂಡಲೇ ವಾಪಾಸ್ ಹೋಗುವಂತೆ ಭಾರತ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.
2018ರ ಆದೇಶಕ್ಕೆ ತಿದ್ದುಪಡಿ ಮಾಡಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗಿಲ್ಗಿಟ್–ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸುವಂತೆ ಪಾಕ್ ಸರ್ಕಾರಕ್ಕೆ ಆದೇಶ ನೀಡಿದ್ದು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಭಾರತ ಈ ಕೂಡಲೇ ಅತಿಕ್ರಮಣ ಮಾಡಿದ ಸ್ಥಳದಿಂದ ಹಿಂದಕ್ಕೆ ಹೋಗಿ ಎಂದು ಸೂಚಿಸಿದೆ.
ಪಾಕಿಸ್ತಾನ ಗಿಲ್ಗಿಟ್–ಬಾಲ್ಟಿಸ್ತಾನ ಪ್ರದೇಶಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ. ಹಾಗಾಗಿ ಆ ಪ್ರದೇಶದಲ್ಲಿಆ ದೇಶದ ಸುಪ್ರೀಂ ಕೋರ್ಟ್ಗಾಗಲಿ ಯಾವುದೇ ಹಕ್ಕಿಲ್ಲ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಕುರಿತಾಗಿ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಲ್ಲಿ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಗಿಲ್ಗಿಟ್–ಬಾಲ್ಟಿಸ್ತಾನ ಸೇರಿದಂತೆ ಇಡೀ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಪಾಕಿಸ್ತಾನಕ್ಕೆ ಭಾತರದ ತಿಳಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತವು ಪಾಕಿಸ್ತಾನದ ಈ ಕ್ರಮವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಆ ದೇಶ ಅತಿಕ್ರಮಿಸಿಕೊಂಡಿರುವ ಜಮ್ಮು–ಕಾಶ್ಮೀರದ ಪ್ರದೇಶಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದೂ ಕೂಡಾ ಸಚಿವಾಲಯ ತಿಳಿಸಿದೆ.