ಬೆಂಗಳೂರು, ಮೇ 04 (Daijiworld News/MSP): ಮದ್ಯದಂಗಡಿಗಳ ಮುಂದೆ ಜನಸಂದಣಿ ನೋಡಿದ್ರೆ 2 ತಿಂಗಳಲ್ಲಿ ಆದ ಶೇಕಡಾ 50%ರಷ್ಟು ನಷ್ಟವನ್ನು ಭರ್ತಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಉತ್ತಮ ರೀತಿಯಲ್ಲಿ ಮದ್ಯ ಮಾರಾಟವಾಗುತ್ತಿದ್ದು, ವೈನ್ ಸ್ಟೋರ್ ಗಳಿಗೆ ಅಗತ್ಯ ಮದ್ಯ ಸರಬರಾಜು ಆಗಲಿದೆ ಎಂದು ಅಬಕಾರಿ ಸಚಿವ ನಾಗೇಶ ಹೇಳಿದ್ದಾರೆ.
ಆದರೆ ಈಗ ನೀಡಲಾಗಿರುವ ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿ ಮದ್ಯಪ್ರಿಯರು ವರ್ತಿಸಬಾರದು. ರಾಜ್ಯದ ಕೆಲವೆಡೆ ಗೊಂದಲವಾದ ಬಗ್ಗೆ ಮಾಹಿತಿ ಬಂದಿದೆ. ಹೀಗಾದ್ರೆ ಮತ್ತೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಸಚಿವರು ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿರುವ ಹೆಚ್ಚಿನ ಮದ್ಯದಂಗಡಿಗಳು ಈಗಾಗಲೇ ಖಾಲಿಯಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ಹೊಸದಾಗಿ ಸರಬರಾಜು ಮಾಡಲು ಗೋದಾಮ್ ಗಳಿಗೆ ಸೂಚನೆ ಕೊಡಲಾಗಿದೆ. ಹೊಸದಾಗಿ ಸರಬರಾಜು ಮಾಡುವ ಮದ್ಯಕ್ಕೆ ಹೊಸ ದರವಿರುತ್ತದೆ . ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ಇದೆ. ವರ್ಷಕ್ಕೆ ೨೩ ಸಾವಿರ ಕೋಟಿ ಆದಾಯ ಅಂದರೆ ಸಣ್ಣ ವಿಚಾರ ಅಲ್ಲಅಬಕಾರಿ ಇಲಾಖೆ ಆದಾಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು .
ಈಗಿರುವ ಮದ್ಯ ಇವತ್ತೇ ಖಾಲಿ ಆಗಿದ್ದು, ಇಂದು ಸಂಜೆಯಿಂದಲೇ ಮದ್ಯದ ಅಂಗಡಿಗಳಿಗೆ ಮದ್ಯ ಸರಬರಾಜು ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.