ಶಿವಮೊಗ್ಗ, ಮೇ 04 (DaijiworldNews/PY) : ಹಸಿರು ವಲಯದಲ್ಲಿದ್ದ ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಇದೀಗ 30ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗದಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾದರೆ, ಇಡೀ ನಗರದಲ್ಲಿ ಪುನಃ ಲಾಕ್ಡೌನ್ ಕಠಿಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಬಂದರೂ ಮತ್ತೆ ಲಾಕ್ಡೌನ್ ಮಾಡಲಾಗುವುದು. ಜನರು ಇದನ್ನು ಅರಿತುಕೊಂಡು ಅಗತ್ಯವಾದ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಕ್ಕೆ ಹೊರಬೇಕು. ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಹೊರ ಜಿಲ್ಲೆಗಳಿಗೆ ತೆರಳಲು ಇಚ್ಚಿಸುವವರಿಗೆ ಒನ್ ವೇ ಪಾಸ್ ಕಲ್ಪಿಸಲಾಗುವುದು. ಹಾಗೆಯೇ ಬೇರೆ ಕಡೆ ಸಿಲುಕಿದ್ದವರನ್ನೂ ಕರೆ ತರಲು ಕೂಡಾ ಪಾಸ್ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರವಲ್ಲದೇ, ತಾಲೂಕುಗಳಲ್ಲಿ ತಹಶೀಲ್ದಾರುಗಳು ಕೂಡಾ ಪಾಸ್ ನೀಡಲಿದ್ದಾರೆ. ಪಾಸ್ ಇಲ್ಲದೆಯೇ ಬೇರೆ ಜಿಲ್ಲೆಗಳಲ್ಲಿ ಅನಧಿಕೃತವಾಗಿ ಅಡ್ಡದಾರಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಮೇಲೆ ಪೊಲೀಸ್ ಕಣ್ಗಾವಲು ಇರಿಸಲಾಗಿದ್ದು, ಅಂತವರ ಮೇಲೆ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ಲಾಕ್ಡೌನ್ ಸಡಿಲಿಸಿದ್ದರೂ, ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ ಗಾಂಧಿ ಬಜಾರ್ ಮತ್ತು ದುರ್ಗಿಗುಡು ರಸ್ತೆಗಳಲ್ಲಿ ಒಂದು ಅಂಗಡಿಳನ್ನು ಮಾತ್ರವೇ ಓಪನ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇಲ್ಲಿಯೂ ಕೂಡಾ ಗಾಂಧಿ ಬಜಾರ್ನಂತೆಯೇ ಒಂದು ಬದಿಯ ಫಾರ್ಮುಲಾ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟಿಗೆ ಜಿಲ್ಲೆಯಲ್ಲಿ ಪ್ರಸ್ತುತ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ ಮದ್ಯದಂಗಡಿಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಸೆಲೂನ್, ಬ್ಯೂಟಿ ಪಾರ್ಲರ್ಗಳನ್ನೂ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.