ಬೆಂಗಳೂರು, ಮೇ 04 (Daijiworld News/MSP): ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಅನುವಾಗುವಂತೆ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ರಾಜ್ಯದ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದವನ್ನು ಸಚಿವರು ನಡೆಸಿದರು. ಎಲ್ಲ ಜಿಲ್ಲೆಗಳಿಂದ ಬಂದ ಒಟ್ಟಾಭಿಪ್ರಾಯದಂತೆ ಮಕ್ಕಳು ತಮ್ಮ ಪರೀಕ್ಷಾ ದಿನಾಂಕ ತಿಳಿಯಲು ಉತ್ಸುಕರಾಗಿದ್ದು ಮತ್ತು ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕೊರೋನಾ ನಂತರದ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸೂಚಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್ ಮೆಂಟ್ ಜಿಲ್ಲೆಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು ಅಭಿಪ್ರಾಯ ಪಡೆದ ಸಚಿವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿರುವ ಈ ದಿನಮಾನಗಳಲ್ಲಿ ಮಕ್ಕಳ ಮಾನಸಿಕ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರೀಕ್ಷಾ ಸಿದ್ಧತೆಯನ್ನು ಜಾರಿಯಲ್ಲಿಡಬೇಕೆಂದು ಸೂಚಿಸಿದರು.
ಮಾಸ್ಕ್ , ಸ್ಯಾನಿಟೈಜರ್ ಹಾಗೂ ಜ್ವರ ತಪಾಸಣೆ ಕಡ್ಡಾಯ:ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಯಾವುದೇ ವಿದ್ಯಾರ್ಥಿಯೂ ನೆಲದ ಮೇಲಾಗಲೀ, ಬಯಲಿನಲ್ಲಾಗಲೀ ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದ ಸಚಿವರು, ಅಗತ್ಯವಾದ ಡೆಸ್ಕ್, ಬೆಂಚ್ ಗಳನ್ನು ಅಸುಪಾಸಿನ ಶಾಲೆಗಳಿಂದ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ವಾತಾವರಣವನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು. ಕಂಟೈನ್ ಮೆಂಟ್ ವಲಯಗಳಲ್ಲಿರುವ ಪರೀಕ್ಷಾ ಕೇಂದ್ರಗಳ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವುದು, ಉಪಕೇಂದ್ರಗಳನ್ನು ಸ್ಥಾಪಿಸುವುದು, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ತಲಾ 24 ಮಕ್ಕಳ ಬದಲಿಗೆ ಕಡಿಮೆ ಸಂಖ್ಯೆಯ ಮಕ್ಕಳನ್ನು ಕೂಡಿಸುವುದು, ಪ್ರತಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ, ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಸಮಗ್ರವಾದ ಕ್ರಿಯಾಯೋಜನೆ ತಯಾರಿಸಬೇಕೆಂದು ಸಚಿವರು ಸೂಚನೆ ನೀಡಿದರು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ನಿರ್ದೇಶನ ನೀಡಿದ ಸಚಿವ ಸುರೇಶ್ ಕುಮಾರ್, ಪರೀಕ್ಷಾ ಕೇಂದ್ರಗಳನ್ನು ಹಾಗೂ ಕೊಠಡಿಗಳನ್ನು ಹೆಚ್ಚಿಸಲು ಸ್ಥಳ ಪರಿಶೀಲನೆ ನಡೆಸಿ ಇಲಾಖಾ ಮುಖ್ಯಸ್ಥರಿಗೆ ಕೂಡಲೇ ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ಪರೀಕ್ಷೆ ಸಿದ್ಧತೆಗೆ ಸಮಯ: ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ವಿಷಯವಾರು ಅವಶ್ಯಕ ಅಂತರವನ್ನು ಕಾಪಾಡಿಕೊಳ್ಳಲು ಯೋಜನೆ ರೂಪಿಸಬೇಕೆಂದು ಇಲಾಖಾ ಆಯುಕ್ತರಿಗೆ ಸೂಚಿಸಿದ ಸುರೇಶ್ ಕುಮಾರ್, ಈಗಾಗಲೇ ಬೇರೆ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಕುರಿತಂತೆ ಕ್ರಿಯಾಯೋಜನೆ ರೂಪಿಸಬೇಕೆಂದು ಸೂಚಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ ಕುರಿತು, ಆನ್ ಲೈನ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆ ವಿನಿಮಯ, ಸಹಾಯವಾಣಿ ಮೂಲಕ ಸಂದೇಹಗಳ ನಿವಾರಣೆ, ಸ್ಥಳೀಯ ರೇಡಿಯೋ ಕೇಬಲ್ ಟಿವಿ ಚಾನೆಲ್ ಗಳ ಮೂಲಕ ಬೋಧನಾ ಪ್ರಕ್ರಿಯೆ ನಿರ್ವಹಣೆ ಸೇರಿದಂತೆ ಇಲಾಖೆಯ ಜಿಲ್ಲಾ ಆಡಳಿತಗಳ ಹಲವಾರು ಉಪಕ್ರಮಗಳನ್ನು ಶ್ಲಾಘಿಸಿದ ಸಚಿವರು, ಪರೀಕ್ಷೆಗಳನ್ನುತುಂಬಾ ಆತ್ಮವಿಶ್ವಾಸದಿಂದ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಇದೇ ರೀತಿಯ ಭರವಸೆ ಮೂಡಿಸುವ ಪ್ರಯತ್ನಗಳು ಪರೀಕ್ಷಾ ಪಕ್ರಿಯೆ ಪೂರ್ಣಗೊಳ್ಳುವವರೆಗೆ ನಿರಂತರವಾಗಿ ಜಾರಿಯಲ್ಲಿರಲಿ ಎಂದು ಸೂಚಿಸದರು. ವಿಡಿಯೋ ಸಂವಾದ ಸಂದರ್ಭದಲ್ಲಿ ಇಲಾಖೆಯ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಡಿಡಿಪಿಐಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಡಿಯೋ ಸಂವಾದ ನಡೆಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.