ನವದೆಹಲಿ, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ ಪರಿಣಾಮ ವಿದೇಶದಲ್ಲೇ ಸಿಲುಕಿರುವ ಭಾರತೀಯರನ್ನು ಕೇಂದ್ರ ಸರ್ಕಾರವು ಮೇ 7 ರಿಂದ ವಿಮಾನ ಹಾಗೂ ನೌಕಪಡೆಯ ಹಡಗುಗಳ ಮೂಲಕ ಹಂತಹಂತವಾಗಿ ಭಾರತಕ್ಕೆ ವಾಪಾಸ್ ಕರೆತರಲಿದೆ.
ಪ್ರಯಾಣಿಕರ ವೈದ್ಯಕೀಯ ತಪಾಸಣೆ ನಡೆಸಿ ಕೊರೊನಾ ಸೋಂಕಿನ ಯಾವುದೇ ಲಕ್ಷಣವಿಲ್ಲದವರಿಗೆ ಮಾತ್ರವೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಪ್ರಯಾಣದ ಹಣವನ್ನು ಅವರೇ ಭರಿಸಬೇಕು ಎಂದು ತಿಳಿಸಿದೆ.
ಹಾಗೆಯೇ ಪ್ರಯಾಣದ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಹಾಗೂ ನಾಗರಿಕ ವಾಯುಯಾನ ಸಚಿವಾಲಯ ಜಾರಿ ಮಾಡಿರುವ ಎಲ್ಲಾ ನಿಯಮಾವಳಿಗಳನ್ನು ಪ್ರಯಾಣಿಕರು ಪಾಲಿಸಬೇಕು ಎಂದು ಹೇಳಿದೆ.
ಭಾರತೀಯ ರಾಯಭಾರಿ ಹಾಗೂ ಹೈಕಮೀಷನ್ ಕಚೇರಿಗಳು, ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯ ಪೌರರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಎಂದು ವರದಿ ತಿಳಿಸಿದೆ.
ಇನ್ನು ಭಾರತಕ್ಕೆ ವಾಪಾಸ್ ಆದ ಬಳಿಕ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಅವರ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಎಲ್ಲರ ಸ್ಕ್ರೀನಿಂಗ್ ಮಾಡಲಾಗುತ್ತದೆ. ಹಾಗೆಯೇ ಆ ಬಳಿಕ ಅವರನ್ನು ರಾಜ್ಯ ಸರ್ಕಾರವು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಬೇಕು. ಅದರ ವೆಚ್ಚವನ್ನೂ ಕೂಡಾ ಕ್ವಾರಂಟೈನ್ನಲ್ಲಿ ಇದ್ದವರು ಭರಿಸಬೇಕು. 14 ದಿನಗಳ ಬಳಿಕ ಕೊರೊನಾ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದೆ.