ನವದೆಹಲಿ, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಾಸ್ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದು ಮಾಲ್ಡೀವ್ಸ್ ಮತ್ತು ಯುಎಇನಲ್ಲಿ ಬಾಕಿಯಾಗಿರುವ ಭಾರತೀಯರನ್ನು ಕರೆತರಲು ಮೂರು ಹಡಗುಗಳನ್ನು ಸೋಮವಾರ ಕಳುಹಿಸಿಕೊಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಪ್ರಕಟನೆ ಮೂಲಕ ತಿಳಿಸಿರುವ ಅವರು, ಯುಎಇಗೆ ಐಎನ್ಎಸ್ ಶಾರ್ದೂಲ್ ನೌಕೆಯನ್ನು ಕಳುಹಿಸಿದ್ದು ಮುಂಬೈ ಕರಾವಳಿಯಲ್ಲಿ ಲಂಗರು ಹಾಕಿದ್ದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗರ್ ನೌಕೆಗಳನ್ನು ಮಾಲ್ಡೀವ್ಸ್ ಗೆ ಕಳುಹಿಸಲಾಗಿದೆ. ಈ ಮೂರು ಹಡಗುಗಳು ಕೊಚ್ಚಿನ್ಗೆ ಆಗಮಿಸಿಲಿದೆ ಎಂದು ಹೇಳಿದ್ದಾರೆ.
ಐಎನ್ಎಸ್ ಮಗರ್ ಹಾಗೂ ಐಎನ್ಎಸ್ ಶಾರ್ದೂಲ್ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ನ ಹಡಗುಗಳಾಗಿದ್ದು, ಐಎನ್ಎಸ್ ಜಲಾಶ್ವ ಪೂರ್ವ ನೌಕಾ ಕಮಾಂಡ್ನದ್ದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ ಮೇ 7 ರಿಂದ ಹಂತಹಂತವಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಿಮಾನ ಮಾರ್ಗವಾಗಿಯೂ ವಾಪಾಸ್ ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ.