ಮೈಸೂರು, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ ಸಡಿಲಿಕೆ ಮಾಡಿ ಮದ್ಯದಂಗಡಿ ತೆರೆದ ಮೊದಲ ದಿನವೇ ಮದ್ಯಪಾನ ಮಾಡಿದ ಗೆಳೆಯರೇ ಯುವಕನೊಬ್ಬನನ್ನು ಇರಿದು ಹತ್ಯೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಲೆಯಾದ ಯುವಕ ಕ್ಯಾತಮಾರನಹಳ್ಳಿಯ ವಾಲ್ಮೀಕಿ ರಸ್ತೆಯ 15ನೇ ಕ್ರಾಸಿನ ಸತೀಶ್ (22) ಎಂದು ಗುರುತಿಸಲಾಗಿದೆ.
ಈ ಯುವಕನ ಸ್ನೇಹಿತರಾದ ಕಿರಣ್, ಮಧು ಹಾಗೂ ಇತರರು ಸೋಮವಾರ ರಾತ್ರಿ ಮನೆಯಿಂದ ಕರೆದುಕೊಂಡು ಹೋಗಿದ್ದು ಸುಮಾರು ನೂರು ಮೀಟರ್ ಅಂತರದಲ್ಲೇ ದೊಣ್ಣೆಯಿಂದ ತಲೆಗೆ ಹೊಡೆದು ಹಾಗೂ ಮಾರಕಾಸ್ತ್ರಗಳಿಂದ ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾರೆ.
ಆ ಕೂಡಲೇ ಅಲ್ಲಿಂದ ಆ ಯುವಕರು ಪರಾರಿಯಾಗಿದ್ದು ಹತ್ಯೆ ಮಾಡಿದವರು ಈ ಸಂದರ್ಭದಲ್ಲಿ ಮದ್ಯಪಾನ ಮಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಎನ್.ಆರ್. ವಿಭಾಗದ ಎಸಿಪಿ ಶಶಿಧರ್ ಹಾಗೂ ಇನ್ ಸ್ಪೆಕ್ಟರ್ ಪೂಣಚ್ಚ ಅವರು ತೆರಳಿ ಪರಿಶೀಲನೆ ನಡೆಸಿದ್ದು ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.