ನವದೆಹಲಿ, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ವಿದೇಶದಲ್ಲೇ ಬಾಕಿಯಾಗಿರುವ ಸಾವಿರಾರು ಪ್ರಜೆಗಳನ್ನು ಕರೆತರಲು ಭಾರತವು 7 ದಿನಗಳ ಕಾಲ 12 ರಾಷ್ಟ್ರಗಳಿಗೆ 64 ವಿಮಾನಗಳನ್ನು ಕಳುಹಿಸಲಿದೆ.
ವಿದೇಶದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ಕಾರ್ಮಿಕರನ್ನು ಕರೆತರಲು 64 ವಿಮಾನಗಳನ್ನು 12 ದೇಶಗಳಿಗೆ ಕಳುಹಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಪಂಜಾಬ್ ವಿಪತ್ತು ನಿರ್ವಹಣಾ ವಿಶೇಷ ಮುಖ್ಯ ಕಾರ್ಯದರ್ಶಿ ಕೆಬಿಎಸ್ ಸಿಧು, ಭಾರತ ಅಂತಿಮವಾಗಿ ತನ್ನ ನಾಗರಿಕರನ್ನು ವಾಪಾಸ್ ಕರೆತರುವ ಕಾರ್ಯ ಪ್ರಾರಂಭಿಸುತ್ತದೆ. ದಿನಕ್ಕೆ ಸುಮಾರು 2000 ಜನರು 7 ದಿನಗಳ ಕಾಲ ಬರಲಿದ್ದಾರೆ. ಪಂಜಾಬ್ಗೆ ದುಬೈ, ಯುಎಇಯಿಂದ ಒಂದು ವಿಮಾನ ಬರಲಿದೆ ಎಂದು ಹೇಳಿದ್ದಾರೆ.
ಮೇ 7 ರಿಂದ ಯುಎಇ, ಕತಾರ್, ಸೌದಿ ಅರೇಬಿಯಾ, ಬಹ್ರೇನ್, ಕುವೈಟ್, ಒಮನ್, ಮಲೇಷ್ಯಾ, ಯುಕೆ, ಸಿಂಗಾಪುರ್, ಬಾಂಗ್ಲಾದೇಶ, ಫಿಲಿಪೈನ್ಸ್ ಮತ್ತು ಯುಎಸ್ಗೆ 64 ವಿಮಾನಗಳನ್ನು ಕಳುಹಿಸಲಾಗುತ್ತದೆ.
ಮುಖ್ಯವಾಗಿ ದೆಹಲಿ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಮೂಲದವರು ವಿದೇಶದಿಂದ ವಾಪಾಸ್ ಬರಲಿದ್ದಾರೆ.
ಕೇರಳ ಒಂದು ರಾಜ್ಯಕ್ಕೆ 15 ವಿಮಾನಗಳಲ್ಲಿ, ದೇಶದ ರಾಜಧಾನಿ ದೆಹಲಿಗೆ ಹಾಗೂ ತಮಿಳುನಾಡಿಗೆ 11 ವಿಮಾನಗಳಲ್ಲಿ, ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ 7 ವಿಮಾನಗಳಲ್ಲಿ, ಗುಜರಾತ್ಗೆ 5 ವಿಮಾನಗಳಲ್ಲಿ, ಜಮ್ಮು- ಕಾಶ್ಮೀರ ಹಾಗೂ ಕರ್ನಾಟಕಕ್ಕೆ ೩ ವಿಮಾನಗಳಲ್ಲಿ, ಪಂಜಾಬ್ ಹಾಗೂ ಉತ್ತರ ಪ್ರದೇಶಕ್ಕೆ ತಲಾ ಒಂದು ವಿಮಾನದಲ್ಲಿ ವಿದೇಶದಲ್ಲಿರುವ ಭಾರತೀಯರು ಆಗಮಿಸಲಿದ್ದಾರೆ.
ಯುಎಇ, ಕುವೈಟ್ ಮತ್ತು ಸೌದಿ ಅರೇಬಿಯಾದಂತಹ ಪಶ್ಚಿಮ ಏಷ್ಯಾದಲ್ಲಿ ಕಾರ್ಮಿಕರು ಹಾಗೂ ಉದ್ಯೋಗ ಕಳೆದುಕೊಂಡವರನ್ನು ಮೊದಲು ಭಾರತಕ್ಕೆ ಕರೆತರಲಾಗುವುದು ಆ ಬಳಿಕ ಇತರ ಉದ್ದೇಶದಿಂದ ಅಲ್ಲಿಗೆ ಹೋಗಿರುವ ವಿದ್ಯಾರ್ಥಿಗಳು ಹಾಗೂ ಭಾರತೀಯರನ್ನು ಹಿಂದಕ್ಕೆ ಕರೆತರಲಾಗುತ್ತದೆ.
ಇನ್ನು ಯುಎಇಯಲ್ಲೇ ಸುಮಾರು 1,50,000 ಭಾರತೀಯರು ದೇಶಕ್ಕೆ ವಾಪಾಸ್ ಆಗಲು ನೊಂದಾವಣೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸುಮಾರು 45,000 ಭಾರತೀಯರು ವೀಸಾ ಗಡುವು ಮುಗಿದಿದ್ದರೂ ಕೊರೊನಾ ಲಾಕ್ಡೌನ್ ಪರಿಣಾಮ ಯುಎಇಯಲ್ಲೇ ಬಾಕಿಯಾಗಿದ್ದು ಯುಎಇ ವಿನಾಯಿತಿ ನೀಡಿದೆ. ಅವರನ್ನು ಮರಳಿ ಕರೆತರಲಾಗುತ್ತದೆ.
ಸರ್ಕಾರವು ಸೋಮವಾರ ಈ ಕುರಿತಾಗಿ ಪ್ರಕಟನೆ ಬಿಡುಗಡೆ ಮಾಡಿದ್ದು ಮೇ 7 ರಿಂದ ಹಂತಹಂತವಾಗಿ ಭಾರತೀಯರನ್ನು ಕರೆತರಲಾಗುತ್ತದೆ. ಪ್ರಯಾಣದ ವೆಚ್ಚವನ್ನು ಅವರೇ ಭರಿಸಬೇಕು. ಪ್ರಯಾಣಿಕರ ವೈದ್ಯಕೀಯ ತಪಾಸಣೆ ನಡೆಸಿ ಕೊರೊನಾ ಸೋಂಕಿನ ಯಾವುದೇ ಲಕ್ಷಣವಿಲ್ಲದವರಿಗೆ ಮಾತ್ರವೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಇನ್ನು ಭಾರತಕ್ಕೆ ವಾಪಾಸ್ ಆದ ಬಳಿಕ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಅವರ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಎಲ್ಲರ ಸ್ಕ್ರೀನಿಂಗ್ ಮಾಡಲಾಗುತ್ತದೆ. ಹಾಗೆಯೇ ಆ ಬಳಿಕ ಅವರನ್ನು ಆಸ್ಪತ್ರೆ ಅಥವಾ ಇತರ ಕಡೆಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವು ಮಾಡುತ್ತದೆ. ಅದರ ವೆಚ್ಚವನ್ನೂ ಕೂಡಾ ವಿದೇಶದಿಂದ ಮರಳಿದವರೇ ಭರಿಸಬೇಕು. 14 ದಿನಗಳ ಬಳಿಕ ಕೊರೊನಾ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದೆ.