ಮೈಸೂರು, ಮೇ 05 (DaijiworldNews/PY) : ಕೆಲ ದಿನಗಳ ಹಿಂದೆ ಮೈಸೂರು ಕೊರೊನಾ ಹಾಟ್ಸ್ಪಾಟ್ ಆಗಿತ್ತು. ಜುಬಿಲೆಂಟ್ಸ್ ಫರ್ಮಾ ಕಾರ್ಖಾನೆಯ ಉದ್ಯೋಗಿಗಳಿಂದ ಕೊರೊನಾ ಸೋಂಕು ಬಂದು ಇಡೀ ನಗರಕ್ಕೆ ಹಾಗೂ ಜಿಲ್ಲೆಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಕಾರ್ಖಾನೆಯ ಉದ್ಯೊಗಿಗಳು ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳ ನಿವಾಸಿಗಳಾಗಿದ್ದರು. ಅಲ್ಲದೇ ಇದರೊಂದಿಗೆ ತಬ್ಲಿಘಿ ಜಮಾತ್ಗೆ ಹೋಗಿ ಬಂದವರ ಪ್ರಕರಣಗಳಿದ್ದ ಕಾರಣ ಜನರಿಗೆ ಭೀತಿ ಇನ್ನು ಹೆಚ್ಚಾಗಿತ್ತು. ಅಲ್ಲದೇ ಸೋಂಕು ಪ್ರಕರಣಗಳು ಬೆಂಗಳೂರಿನ ಪ್ರಕರಣಗಳಿಂದ ಜಾಸ್ತಿ ಆಗುವ ನಿರೀಕ್ಷೆಯಿತ್ತು. ಆದರೆ, ದಿನಗಳು ಕಳೆದಂತೆ ಮೈಸೂರಿಗೆ ಅಂಟಿದ ಕೊರೊನಾ ಕಳಂಕ ನೀಗುತ್ತಾ ಬಂದಿದೆ.
ಮೈಸೂರಿನಲ್ಲಿ 88 ಇದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಇದೀಗ ಒಂದಂಕಿಗೆ ಬಂದಿದೆ. ಬಹುತೇಕ ಜನ ಸೋಂಕಿತರಲ್ಲಿ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕನ್ನು ಹೇಗೆ ನಿಯಂತ್ರಣ ಮಾಡುವುದು ಎಂದು ಬೇರೆಲ್ಲಾ ಕಡೆ ಪರದಾಡುತ್ತಿದ್ದರೆ ಮೈಸೂರಿಗೆ ಮಾತ್ರ ಇದು ಹೇಗೆ ಸಾಧ್ಯ ಎಂಬ ಅಚ್ಚರಿ ಎಲ್ಲರಿಗೂ ಇರಬಹುದು. ಕೊರೊನಾ ನಿಯಂತ್ರಣವಾಗಲು ಮೈಸೂರು ಜಿಲ್ಲಾಡಳಿತ ಕೈಗೊಂಡ ಅನೇಕ ದಿಟ್ಟ ಕ್ರಮಗಳೇ ಇದಕ್ಕೆ ಕಾರಣ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಮೈಸೂರಿನ ಅಧಿಕಾರಿಗಳು ಕೈಗೊಂಡ ಕ್ರಮಗಳಿಂದ ಹಾಗೂ ಮೈಸೂರಿನ ಜನರ ಸಹಕಾರದಿಂದ ಮೈಸೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ.
ಮೈಸೂರಿನಲ್ಲಿ ಕೊರೊನಾ ಸೋಂಕು ಶುರುವಾಗಿದ್ದು ಜುಬಿಲೆಂಟ್ಸ್ ಕಾರ್ಖಾನೆಯ ಉದ್ಯೋಗಿಗಳಿಂದ. ಇದರ ಉದ್ಯೋಗಿಯಾಗಿದ್ದ ಪಿ-52ರಿಗೆ ಸೋಂಕು ಇರುವುದು ದೃಢವಾಗಿತ್ತು. ಬಳಿಕ ಹಲವಾರು ಮಂದಿಗೆ ಕೊರೊನಾ ಪಾಸಿಟಿವ್ ಬರತೊಡಗಿತು. ಜಿಲ್ಲಾಡಳಿತವು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಜುಬಿಲೆಂಟ್ಸ್ ಪ್ರಕರಣಗಳತ್ತ ಹೆಚ್ಚು ಗಮನ ಹರಿಸಿ, ಇಡೀ ಕಾರ್ಖಾನೆ ಬಂದ್ ಮಾಡಿತ್ತು. ಅಲ್ಲದೇ ಎಲ್ಲಾ ಉದ್ಯೋಗಿಗಳಿಗೆ ಕ್ವಾರಂಟೈನ್ಗೆ ಒಳಪಡಿಸಿತ್ತು. ಒಟ್ಟು 500 ಮಂದಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಅಲ್ಲದೇ, ಕೊರೊನಾ ಆಸ್ಪತ್ರೆಗೆ ಬೇರೆ ಯಾರಿಗೂ ಪ್ರವೇಶ ನೀಡದೇ ಇರುವಂತೆ ಎಚ್ಚರ ವಹಿಸಲಾಗಿತ್ತು.
ಅಲ್ಲದೇ, ತಬ್ಲಿಘಿಗಳಿಗೆ ಹೋಗಿ ಬಂದವರು ಹಾಗೂ ಅವರ ಸಂಪರ್ಕದಲ್ಲಿದ್ದವರನ್ನು ಹುಡುಕಿ ಕ್ವಾರಂಟೈನ್ನಲ್ಲಿಡಲಾಯಿತು. ಅವರೆಲ್ಲರನ್ನೂ ಎಲ್ಲೂ ಹೊರಗೆ ಹೋಗದಂತೆ ನಿಗಾದಲ್ಲಿರಿಸಲಾಯಿತು.
ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಗಡಿ ಹೊಂದಿರುವ ಮೈಸೂರಿಗೆ ಆ ಮೂಲಕವೂ ಕೊರೊನಾ ಸೋಂಕು ವ್ಯಾಪಿಸುವ ಆತಂಕವೂ ಇತ್ತು. ಹಾಗಾಗಿ ಜಿಲ್ಲಾಡಳಿತ ಗಡಿ ಬಂದ್ ಮಾಡಲು ಕ್ರಮ ಕೈಗೊಂಡಿತ್ತು. ಚಾಮರಾಜನಗರದ ಮುಖಾಂತರ ತಮಿಳುನಾಡಿನ ಗಡಿ ಬಂದ್ ಮಾಡಲಾಗಿತ್ತು. ಅಲ್ಲದೇ ಹೆಚ್.ಡಿ. ಕೋಟಿ ಹಾಗೂ ಪಿರಿಯಾಪಟ್ಟಣದಲ್ಲಿ ಕೇರಳಕ್ಕೆ ಹೋಗುವ ರಸ್ತೆಗಳನ್ನ ಬಂದ್ ಮಾಡಲಾಯಿತು.
ಸೋಂಕು ಪತ್ತೆಯಾದ ಗ್ರಾಮಗಳು ಹಾಗೂ ಪ್ರದೇಶಗಳನ್ನೂ ಸೀಲ್ಡೌನ್ ಮಾಡಲಾಯಿತು. ಅಲ್ಲದೇ, ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಹಾಗಾಗಿ ಅವರು ಬೇಗನೇ ಚೇತರಿಸಿಕೊಳ್ಳುಲು ಸಾಧ್ಯವಾಯಿತು. ಕೈಗೊಂಡಿದ್ದ ಎಲ್ಲಾ ಕ್ರಮಗಳಿಂದ ಜಿಲ್ಲಾಡಳಿತವು ಮೈಸೂರಿಗೆ ಬಂದಿದ್ದ ಕೊರೊನಾ ಕಳಂಕವನ್ನು ನೀಗಿಸಿದೆ.