ಕೋಯಿಕ್ಕೋಡ್, ಮೇ 05 (Daijiworld News/MB) : 2018ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದ ಕೇರಳದ ಬುಡಕಟ್ಟು ಜನಾಂಗದ ಮೊದಲ ಮಹಿಳೆ 26 ರ ಹರೆಯದ ಶ್ರೀಧನ್ಯಾ ಸುರೇಶ್ ಇದೀಗ ಕೋಯಿಕ್ಕೋಡ್ ಜಿಲ್ಲೆಯ ಉಪಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇವರು ವಯನಾಡು ಜಿಲ್ಲೆಯ ಪುದುತನ ಪಂಚಾಯತ್ ನಿವಾಸಿಯಾದ ಶ್ರೀಧನ್ಯಾ ಕುರಿಚಿಯಾ ಎಂಬ ಬುಡಕಟ್ಟು ಸಮುದಾಯದವರಾಗಿದ್ದು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 410ನೇ ರ್ಯಾಂಕ್ ಪಡೆದಿದ್ದರು. ಮುಸ್ಸೋರಿಯಲ್ಲಿ ತರಬೇತಿ ಪಡೆದು ಮರಳಿರುವ ಇವರು ಎರಡು ವಾರಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿರುವ ಈ ಸಂದರ್ಭದಲ್ಲೇ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಶ್ರೀಧನ್ಯಾ ಅವರು ಕೋಯಿಕ್ಕೋಡ್ನ ದೇವಗಿರಿ ಸೇಂಟ್ ಜಾಸೆಫ್ ಕಾಲೇಜಿನಲ್ಲಿ ಪದವಿ ಪಡೆದಿದ್ದು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡಿದ್ದಾರೆ. ಇವರ ತಂದೆ ಸುರೇಶ್ ಹಾಗೂ ತಾಯಿ ಕಮಲಾ ಮನರೇಗಾ ಯೋಜನೆಯಡಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು ಸಹೋದರಿ ಲಾಸ್ಟ್ ಗ್ರೇಡ್ ಸರ್ಕಾರಿ ಉದ್ಯೋಗಿಯಾಗಿದ್ದು ತಮ್ಮ ಪಾಲಿಟೆಕ್ನಿಕಲ್ ವಿದ್ಯಾರ್ಥಿಯಾಗಿದ್ದಾನೆ.
ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿರುವ ಸರ್ಕಾರಿ ಯೋಜನೆಯೊಂದರ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾನಂತವಾಡಿ ಉಪ ಜಿಲ್ಲಾಧಿಕಾರಿ ಶ್ರೀರಾಮ್ ಸಾಂಬಶಿವ ರಾವ್ ಅವರಿಗೆ ಜನರು ನೀಡುತ್ತಿದ್ದ ಗೌರವ ನೋಡಿದ್ದ ಶ್ರೀ ಧನ್ಯಾ ಅವರು ತಾನು ಐಎಎಸ್ ಮಾಡಬೇಕು ಹಾಗೂ ನಾಗರಿಕ ಸೇವಾ ಅಧಿಕಾರಿ ಆಗಬೇಕೆಂದು ಅಂದುಕೊಂಡಿದ್ದರು. ಆದರೆ ಅಶ್ಚರ್ಯವೆಂಬಂತೆ ಶ್ರೀರಾಮ್ ಸಾಂಬಶಿವ್ ಅವರು ಆಗ ಕೋಳಿಕ್ಕೋಡ್ ಜಿಲ್ಲಾಧಿಕಾರಿಯಾಗಿದ್ದು, ಈಗ ಎಲ್ಲಿಯೇ ಶ್ರೀಧನ್ಯಾ ಉಪಜಿಲ್ಲಾಧಿಕಾರಿಯಾಗಿದ್ದಾರೆ.