ಬೆಂಗಳೂರು, ಮೇ 05 (Daijiworld News/MB) : ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಸರ್ಕಾರ ಅವರಿಗೆ ಕೆಲಸ ದೊರಕಿಸುತ್ತದೆ. ಕೈಗಾರಿಕೆ ಸಂಸ್ಥೆಗಳು ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಹೇಳಿದರು.
ಮಂಗಳವಾರ ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಬಿಲ್ಡರ್ಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಪ್ಪುಗ್ರಹಿಕೆಯಿಂದ ಬಹಳಷ್ಟು ಜನರು ಊರಿಗೆ ಹೋಗಲು ಮುಂದಾಗಿದ್ದು ಕೆಲವರಿಗೆ ಈಗಾಗಲೇ ಇಲ್ಲೇ ಉಳಿಯುವಂತೆ ಮನವರಿಕೆ ಮಾಡಿದ್ದೇನೆ. ಕಾರ್ಮಿಕರು ತರಾತುರಿಯಲ್ಲಿ ಊರಿಗೆ ಹೋಗಬೇಕೆಂದು ಯತ್ನಿಸುತ್ತಿದ್ದಾರೆ. ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಅನುಕೂಲವನ್ನು ಸಾವಿರಾರು ಕಾರ್ಮಿಕರಿಗೆ ಮಾಡಲಾಗಿದೆ. ಕೆಲಸ ಮಾಡದಿದ್ದರೂ ಸಂಬಳ, ಒಳ್ಳೆಯ ಊಟ ನೀಡಿದ್ದೇವೆ ಎಂದು ಬಿಲ್ಡರ್ಗಳು ತಿಳಿಸಿದ್ದಾರೆ. ನೀವು ಊರಿಗೆ ಮರಳಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ನೇಕಾರರೂ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಆರ್ಥಿಕ ಇಲಾಖೆಯೊಂದಿಗೆ ಹಣಕಾಸಿನ ಇತಿ ಮಿತಿ ಬಗ್ಗೆಯೂ ಚರ್ಚಿಸಿ ಕೆಲವು ಸವಲತ್ತುಗಳನ್ನು ನೀಡಲು ಯತ್ನಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಈ ಹಿನ್ನಲೆಯಲ್ಲಿ ರೆಡ್ ಝೋನ್ ಹೊರತು ಪಡಿಸಿ ಉಳಿದೆಡೆ ವ್ಯಾಪಾರ, ಕಟ್ಟಡ ನಿರ್ಮಾಣ ಕಾಮಗಾರಿ, ಕೈಗಾರಿಕೆ ಕೆಲಸ ಮತ್ತೆ ಆರಂಭ ಮಾಡಬೇಕಾಗಿದೆ. ಈ ಕಾರಣದಿಂದಾಗಿ ಕಾರ್ಮಿಕರ ಅನಗತ್ಯ ಪ್ರಯಾಣ ನಿಯಂತ್ರಣ ಮಾಡುವ ಬಗ್ಗೆಯೂ ಬಿಲ್ಡರ್ಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.