ಬೆಂಗಳೂರು, ಮೇ 05 (DaijiworldNews/PY) : ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದ್ದು ಪ್ರಮುಖ ಖಾತೆಗಳ ಸಚಿವರ ನಡುವೆ ಬಹಿರಂಗವಾಗಿ ಸಂಘರ್ಷ ನಡೆಯುತ್ತಿದೆ. ಸಿಎಂ ಬಿಎಸ್ವೈ ಅವರಿಗೆ ಸಚಿವರ ಮೇಲೆ ನಿಯಂತ್ರಣ ಇಲ್ಲ. ಇದರಿಂದಾಗಿ ಪ್ರತಿಬಾರಿ ಸರ್ಕಾರದ ನಿರ್ಧಾರ ಬದಲಾಗುತ್ತಿರುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವೈಜ್ಞಾನಿಕ ಮಾನದಂಡಗಳಿಲ್ಲದೆ ಜಿಲ್ಲೆಗಳನ್ನು ಕೆಂಪು/ಕಿತ್ತಳೆ/ ಹಸಿರು ವಲಯ ಮಾಡಿರುವುದು ಬಾಲಿಷತನ. ಹೆಚ್ಚು ಸೋಂಕು ಪ್ರಕರಣಗಳ ಜಿಲ್ಲೆಗಳನ್ನು ಕೈಬಿಟ್ಟು ಕೆಂಪಿನಿಂದ ಕಿತ್ತಳೆ ವಲಯಕ್ಕೆ ಸೇರಿಸಲಾಗಿದೆ. ಈ ವಿಂಗಡಣೆಗೆ ಮಾನದಂಡಗಳೇನು ಎಂಬುದನ್ನು @CMofKarnataka ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ. ತಿಳಿಸಿದ್ದಾರೆ.
ಸಚಿವರೊಳಗಿನ ತಿಕ್ಕಾಟ, ಪಕ್ಷದ ಹಸ್ತಕ್ಷೇಪ, ಪರಿವಾರದ ಕಾರ್ಯಕರ್ತರ ಪೊಲೀಸ್ ಗಿರಿ ಮತ್ತು Trial&Error ನೀತಿಯಿಂದಾಗಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಉಲ್ಭಣಿಸುತ್ತಿದೆ. @CMofKarnataka ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಹಳೆತಪ್ಪನ್ನು ಸರಿಪಡಿಸಲು ಹೊಸ ತಪ್ಪು ಮಾಡುತ್ತಿದ್ದಾರೆ ಎಂದಿದ್ದಾರೆ.
ಮದ್ಯದಂಗಡಿ ತೆರೆದದ್ದು @CMofKarnataka ಅವರ ಅವಸರದ ಮತ್ತು ಪೂರ್ವ ಸಿದ್ದತೆಯಿಲ್ಲದ ನಿರ್ಧಾರ. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿ ಕೊರೊನಾ ಸೋಂಕು ಉಲ್ಭಣಿಸಿದರೆ ಅದರ ಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಹೇರುವ ಮೊದಲು ಬೆಂಗಳೂರು ನಗರದಿಂದ ಜನರನ್ನು ತೆರಳದಂತೆ ಸೂಚಿಸಿ, ನಂತರ ನಿರ್ಧಾರ ಬದಲಿಸಿ ತೆರಳಲು ಅವಕಾಶ ನೀಡಿದ್ದು ಬಸ್ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ಜನದಟ್ಟಣೆಗೆ ಕಾರಣವಾಗಿತ್ತು. ಜಿಲ್ಲೆಗಳಿಗೆ ಸೋಂಕು ಹರಡಲು ಇದುಪ್ರಮುಖ ಕಾರಣ.ಆ ತಪ್ಪು ಮರುಕಳಿಸುತ್ತಿದೆ ಎಂದಿದ್ದಾರೆ.
ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಹೇಳಿದ @CMofKarnataka ಒಮ್ಮೆ ದುಪ್ಪಟ್ಟು,ನಂತರ ಏಕಮುಖ ಬಸ್ದರ ವಿಧಿಸಿ,ನಂತರ ನಮ್ಮ ಒತ್ತಡದಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಪೂರ್ವ ಸಿದ್ಧತೆಯಿಲ್ಲದ ಅವಸರದ ನಿರ್ಧಾರದಿಂದ ಬಡಪಾಯಿಜನ ಸತ್ತು ಬದುಕಿದ ಸ್ಥಿತಿಯಲ್ಲಿ ಊರಿಗೆ ತೆರಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.