ಉತ್ತರ ಪ್ರದೇಶ, ಮೇ 05 (DaijiworldNews/PY) : ಸ್ಮಾರ್ಟ್ಫೋನ್ಗಳಲ್ಲಿ ಸಂಪರ್ಕ ಪತ್ತೆಹಚ್ಚುವ ಅಪ್ಲಿಕೇಶನ್ ಇಲ್ಲದಿದ್ದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ನೋಯ್ಡಾ ಪೊಲೀಸರು ಮುಂದಾಗಿದ್ದಾರೆ.
ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಲ್ಲಿ ವಾಸ ಮಾಡುವವರ ಸ್ಮಾರ್ಟ್ಫೋನ್ಗಳಲ್ಲಿ ಸಂಪರ್ಕ ಪತ್ತೆಹಚ್ಚುವ ಅಪ್ಲಿಕೇಶನ್ ಇಲ್ಲದೇ ಇದ್ದರೆ ದಂಡ ಅಥವಾ ಶಿಕ್ಷೆ ವಿಧಿಸಲಾಗುತ್ತದೆ. ಈ ಆದೇಶವು ನಗರಕ್ಕೆ ಬರುವವರಿಗೂ ಅನ್ವಯವಾಗುತ್ತದೆ ಎಂದು ಹೇಳಲಾಗುತ್ತದೆ.
ಸ್ಮಾರ್ಟ್ಫೋನ್ಗಳನ್ನು ಬಳಸುತ್ತಿದ್ದು, ಆ್ಯಪ್ ಹೊಂದಿಲ್ಲದಿದ್ದರೆ ಅಂತವರ ವಿರುದ್ದ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆ ಅಥವಾ ದಂಡ ವಿಧಿಸಬೇಕೆ ಎಂದು ತೀರ್ಮಾನಿಸಲಾಗುತ್ತದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಖಿಲೇಶ್ ಕುಮಾರ್ ತಿಳಿಸಿದ್ದಾರೆ.
ಐಪಿಸಿಯ ಸೆಕ್ಷನ್ 188ರ ಅನ್ವಯ ಸಾರ್ವಜನಿಕ ಅಧಿಕಾರಿಗಳಿಂದ ಘೋಷಿಸಲ್ಲಟ್ಟ ಆದೇಶಕ್ಕೆ ಅವಿಧೇಯತೆ ತೋರುವುದು ಶಿಕ್ಷಾರ್ಹ ಅಪರಾಧವಾಗಿದೆ. ಒಬ್ಬ ವ್ಯಕ್ತಿಯನ್ನು 6 ತಿಂಗಳವರೆಗೆ ಜೈಲಿನಲ್ಲಿಡಬಹುದು ಅಥವಾ ₹1000 ದಂಡ ವಿಧಿಸಬಹುದಾಗಿದೆ.
ಜನರು ಆರೋಗ್ಯ ಸೇತು ಆ್ಯಪ್ ಅನ್ನು ತಕ್ಷಣವೇ ಡೌನ್ಲೋಡ್ ಮಾಡಿದರೆ, ನಾವು ಅವರನ್ನು ಹೋಗಲು ಬಿಡುತ್ತೇವೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿಯೂ ಆ್ಯಪ್ ಅನ್ನು ಡೌನ್ಲೋಡ್ ಮಾಡಿದಿದ್ದರೆ ಅವರ ವಿರುದ್ದ ಕ್ರಮ ತಗೆದುಕೊಳ್ಳತ್ತೇವೆ ಎಂದು ಅವರು ಹೇಳಿದ್ದಾರೆ.
ಮೊಬೈಲ್ ಡೇಟಾ ಯಾರಾದರೂ ಹೊಂದಿಲ್ಲದಿದ್ದರೆ, ಅವರಿಗೆ ಹಾಟ್ಸ್ಪಾಟ್ ಸಂಪರ್ಕ ವ್ಯವಸ್ಥೆ ನೀಡಲಾಗುತ್ತದೆ. ಫೋನ್ ಸಂಗ್ರಹಣೆಯ ಸಮಸ್ಯೆಯಿದ್ದರೆ ಅಂತವರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಆ್ಯಪ್ ಡೌನ್ಲೋಡ್ ಮಾಡಿದ್ದಾರೆಯೇ ಎಂದು ಪರೀಕ್ಷಿಸಲು ಕರೆ ಮಾಡಲಾಗುತ್ತದೆ. ಗಡಿ, ಮಾರುಕಟ್ಟೆ ಸೇರಿದಂತೆ ಯಾವುದೇ ಪ್ರದೇಶಗಳಲ್ಲಿ ತಪಾಸಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.