ಬೆಂಗಳೂರು, ಮೇ 06 (Daijiworld News/MB) : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಸಮಾರಂಭದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಕುರಿತು ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ನಡೆಸಿದ್ದು ವಿಚಾರಣೆ ಸಂದರ್ಭದಲ್ಲಿ ಹೆಚ್ಚುವರಿ ಸರ್ಕಾರಿ ವಕೀಲ ವಿಕ್ರಂ ಹುಯಿಲಗೋಳ ಅವರು ನ್ಯಾಯಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು.
ಏಪ್ರಿಲ್ 17ರಂದು ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ನಡೆದ ನಿಖಿಲ್ ವಿವಾಹಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಡಿವೈಎಸ್ಪಿ ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದು ವಿವಾಹದಲ್ಲಿ ವರ ಹಾಗೂ ವಧುವಿನ ಕುಟುಂಬದಿಂದ ಒಟ್ಟು 80 ರಿಂದ 95 ಜನ ಭಾಗಿಯಾಗಿದ್ದರು. ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿತ್ತು. ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಲಾಗಿತ್ತು. ಮಾಂಗಲ್ಯ ಧಾರಣೆ ಸಂಧರ್ಭದಲ್ಲಿ ಮಾತ್ರ ಕುಟುಂಬಸ್ಥರು ಮಾಸ್ಕ್ ಧರಿಸದೇ ಇರುವುದು ಕಂಡು ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇದನ್ನು ನ್ಯಾಯಪೀಠ ಒಪ್ಪದೆ, ಮದುವೆಯಲ್ಲಿ 80ರಿಂದ 90 ಜನ ಭಾಗವಹಿಸಲು ಅನುಮತಿ ನೀಡಬಹುದೇ, ಇದುವೇ ಲಾಕ್ಡೌನ್ ನಿಯಮ ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನಿಸಿದ್ದು ಈ ಕುರಿತಾಗಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹಾಗೆಯೇ ವಿಚಾರಣೆಯನ್ನು ಮುಂದೂಡಿದೆ.