ನವದೆಹಲಿ, ಮೇ 06 (Daijiworld News/MB) : ಲಾಕ್ಡೌನ್ ಸಡಿಲಿಕೆಯ ಬೆನ್ನಲ್ಲೇ ಕೊರೊನಾ ಮಹಾಮಾರಿಯ ಅಟ್ಟಹಾಸ ಮೀತಿ ಮೀರಿದ್ದು ಒಂದೇ ದಿನದಲ್ಲಿ ದಾಖಲೆಯ 3,900 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 195 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 46711 ಕ್ಕೆ ಏರಿಕೆಯಾಗಿದೆ. ಕೊರೊನಾಗೆ ಭಾರತದಲ್ಲಿ 1583 ಮಂದಿ ಬಲಿಯಾಗಿದ್ದು 13161 ಮಂದಿ ಗುಣಮುಖರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯವು ನಾವು ಒಂದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಈ ಸಂದರ್ಭದಲ್ಲಿ ಸಕಾಲಿಕ ವರದಿ ಹಾಗೂ ಅವುಗಳ ನಿರ್ವಹಣೆ ಅತೀ ಮುಖ್ಯ. ಆದರೆ ಕೆಲವು ರಾಜ್ಯಗಳು ಸಮಯಕ್ಕೆ ಸರಿಯಾಗಿ ಪ್ರಕರಣಗಳ ಬಗ್ಗೆ ವರದಿ ಮಾಡುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹಾಗಾಗಿ ಕೆಲವು ತೊಂದರೆಗಳು ಉಂಟಾಗಿದೆ. ಅವರಿಗೆ ಈ ಬಗ್ಗೆ ತಿಳಿಸಲಾಗಿದೆ. ಈ ಸಮಸ್ಯೆಯನ್ನು ಈಗ ಪರಿಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 14541 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 583 ಮೃತಪಟ್ಟರೆ 2465 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ 659 ಪ್ರಕರಣಗಳು ದಾಖಲಾಗಿದ್ದು 28 ಮಂದಿ ಸಾವನ್ನಪ್ಪಿದ್ದು 324 ಮಂದಿ ಗುಣಮುಖರಾಗಿದ್ದಾರೆ.
ಗುಜರಾತ್ನಲ್ಲಿ 5804, ದೆಹಲಿಯಲ್ಲಿ 4898 ಪ್ರಕರಣಗಳು, ತಮಿಳುನಾಡಿನಲ್ಲಿ 3550 ಪ್ರಕರಣಗಳು, ರಾಜಸ್ಥಾನದಲ್ಲಿ 3061 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 3047 ಆಂಧ್ರ ಪ್ರದೇಶದಲ್ಲಿ 1717 ಪ್ರಕರಣ, ತೆಲಂಗಾಣದಲ್ಲಿ 1085 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2859, ಕೇರಳ 500 ಪ್ರಕರಣಗಳು, ಜಮ್ಮು ಕಾಶ್ಮೀರದಲ್ಲಿ 726 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 1259 ಪ್ರಕರಣಗಳು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.