ನವದೆಹಲಿ, ಮೇ 6 (Daijiworld News/MSP): ಕೇಂದ್ರ ಸರ್ಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ರಸ್ತೆ ಸೆಸ್ ಅನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಳ ಮಾಡಿದೆ. ದೇಶವ್ಯಾಪ್ತಿ ಹೇರಲಾಗಿದ್ದ ಲಾಕ್ ಡೌನ್ ನಿಂದ ಆಗಿರುವ ಆರ್ಥಿಕ ನಷ್ಟವನ್ನು ತುಂಬಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಡೀಸೆಲ್ಗೆ 5 ರೂಪಾಯಿ ಮತ್ತು ಪೆಟ್ರೋಲ್ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ ಎರಡೂ ಇಂಧನಗಳ ಮೇಲೆ ರಸ್ತೆ ಸೆಸ್ ಅನ್ನು 8-8 ರೂ.ಗಳಿಗೆ ಹೆಚ್ಚಿಸಲಾಗಿದೆ. ಹೊಸ ಆದೇಶದ ನಂತರ ಜನ ಪ್ರತಿ ಲೀಟರ್ ಪೆಟ್ರೋಲ್ಗೆ ₹ 10 ಮತ್ತು ಪ್ರತಿ ಲೀಟರ್ ಡೀಸೆಲ್ಗೆ ₹ 13 ಹೆಚ್ಚಳವಾಗಿದೆ.
ಆದರೆ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ಗಳ ಮಧ್ಯೆ ಅಬಕಾರಿ ಸುಂಕ ಹೆಚ್ಚಳದಿಂದಾಗಿ ಇವುಗಳ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಈ ಬದಲಾವಣೆಯು ಸಾಮಾನ್ಯ ಜನರ ಜೇಬಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಂಧನ ಪಂಪ್ನಲ್ಲಿ ಚಿಲ್ಲರೆ ಬೆಲೆಗಳು ಒಂದೇ ಆಗಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಸುಂಕ ಹೆಚ್ಚಳದಿಂದ ಬಂದ ಹಣವನ್ನು ಮೂಲ ಸೌಕರ್ಯ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆಯನ್ನು 1 ರೂ. ನಂತೆ ಹೆಚ್ಚಿಸಿದರೆ, ಸರ್ಕಾರಿ ಬೊಕ್ಕಸಕ್ಕೆ ವಾರ್ಷಿಕ 14,500 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುತ್ತದೆ. ಆದರೆ ಲಾಕ್ಡೌನ್ ವಿಸ್ತರಣೆಯಿಂದ ಕುಂಠಿತಗೊಂಡಿರುವ ಬೇಡಿಕೆ ಹೆಚ್ಚಿದಲ್ಲಿ ಮಾತ್ರ ಇದರ ಪ್ರಯೋಜನ ಸಿಗಲಿದೆ.