ಬೆಳಗಾವಿ, ಮೇ 06 (Daijiworld News/MB) : ಜಿಲ್ಲಾಧಿಕಾರಿ ನಿವಾಸದ ಪ್ರವೇಶ ದ್ವಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಗಾರ್ಡ್ (ಪೊಲೀಸ್ ಕಾನ್ಸ್ಟೆಬಲ್) ತನ್ನ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾಧವ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ಟೆಬಲ್ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿದ ಪ್ರಕಾಶ ಗುರುವಣ್ಣ (35). ಇವರು 13 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್ ಅವರು, "ಜಿಲ್ಲಾಧಿಕಾರಿಗಳ ನಿವಾಸಕ್ಕೆ ರಾತ್ರಿ ವೇಳೆ ನಿಯಮಿತವಾಗಿ ಗಾರ್ಡ್ ನಿಯೋಜನೆ ಮಾಡಲಾಗುತ್ತದೆ. ಒಂದು ವಾರದಿಂದ ಪ್ರಕಾಶ್ ಅವರನ್ನು ಈ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರು ಇಲಾಖೆಯಿಂದ ನೀಡಲಾಗಿರುವ ಎಸ್ಎಲ್ಆರ್ ಬಂದೂಕಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೋವ್ಯಾದಿಯಿಂದ ಬಳಲುತ್ತಿದ್ದು ಔಷಧಿ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ" ಎಂದು ತಿಳಿಸಿದರು.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
'ಬೆಂಗಳೂರಿನಲ್ಲಿ ನೇಮಕವಾಗಿದ್ದ ಅವರು ನಂತರ ವರ್ಗಾವಣೆಯಾಗಿ ಇಲ್ಲಿನ ಸಿಎಆರ್ಗೆ ಬಂದಿದ್ದಾರೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಅವರು ಎರಡು ವರ್ಷಗಳಿಂದ ಮನೋವ್ಯಾದಿಯಿಂದ ಬಳಲುತ್ತಿದ್ದರು, ಔಷಧಿ ಪಡೆಯುತ್ತಿದ್ದರು ಎಂದು ಅವರ ಸಹೋದರ ತಿಳಿಸಿದ್ದಾರೆ.