ಬೆಂಗಳೂರು, ಮೇ 6 (Daijiworld News/MSP): ಕೊರೊನಾ ಟೆಸ್ಟ್ ನಡೆಸುವ ವೇಳೆ ಆರೋಗ್ಯ ಇಲಾಖೆ ಮಹಾ ಎಡವಟ್ಟು ನಡೆಸಿದೆ. ಒಂದೇ ಆಸ್ಪತ್ರೆಯಲ್ಲಿ ಒಂದೇ ಹೆಸರಿನ ಇಬ್ಬರಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು, ಈ ವೇಳೆ ನೆಗೆಟಿವ್ ರಿಪೋರ್ಟ್ ಬಂದಿದ್ದ ಪೇದೆಗೆ ಪಾಸಿಟಿವ್ ಎಂದು ವರದಿ ನೀಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ಇದರಿಂದ ಸೋಂಕಿತನಲ್ಲದ ಪೇದೆ ಸಂಕಷ್ಟಕ್ಕೀಡಾಗಿದ್ದಾರೆ. ಸುಖಾಸುಮ್ಮನೆ ನೆಗೆಟಿವ್ ವ್ಯಕ್ತಿಯ ಮನೆಯವರನ್ನ ಕ್ವಾರಂಟೈನ್ ಮಾಡಲಾಗಿದೆ. ಪೇದೆಗೆ ಸೋಂಕು ತಗುಲಿದೆ ಎಂಬ ವಿಷಯದಿಂದ ವಿನಾಕಾರಣ ಬೇಗೂರು ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಚಾಮರಾಜನಗರದಲ್ಲಿ ಆತಂಕ ಶುರುವಾಗಿತ್ತು. ಆದ್ರೆ ಈಗ ಎಲ್ಲರ ಆತಂಕ ದೂರವಾಗಿದೆ.
ಮೇ1 ರಂದು ಆರೋಗ್ಯ ಇಲಾಖೆ 700 ಮಂದಿಗೆ ರ್ಯಾಂಡಮ್ ಟೆಸ್ಟ್ ಮಾಡಿತ್ತು. ಅಂದೇ ಬೇಗೂರು ಠಾಣೆಯ ಪೇದೆ ಸೇರಿದಂತೆ 30 ಮಂದಿಗೆ ಜಯನಗರ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ, ಬೇಗೂರು ಠಾಣೆಯ ಪೇದೆ ಹಾಗೂ ಮತ್ತೊಬ್ಬರ ಹೆಸರು ಒಂದೇ ಆಗಿದ್ದು, ವಯಸ್ಸು ಕೂಡ ಒಂದೇ ಆಗಿದೆ. ಹೀಗಾಗಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದ್ದು, ಸೋಂಕು ನೆಗೆಟಿವ್ ಬಂದಿದ್ದ ಪೇದೆಗೆ ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ನೀಡಲಾಗಿದೆ. ಇನ್ನು ಪೊಲೀಸ್ ಪೇದೆಯ ಟೆಸ್ಟ್ ಕ್ರಮ ಸಂಖ್ಯೆ 9601. ಆದ್ರೆ ಪೇದೆ ಹೆಸರಿನ ಮತ್ತೊಬ್ಬ ವ್ಯಕ್ತಿ ಕ್ರಮ ಸಂಖ್ಯೆ 10394. ಆದರೆ ವ್ಯಕ್ತಿ ವಯಸ್ಸು, ಹೆಸರು ಒಂದೇ ಆಗಿದ್ದರಿಂದ ಯಡವಟ್ಟಾಗಿದೆ.
ಇನ್ನು ಆತಂಕಕಾರಿ ವಿಚಾರ ಎಂದರೆ, ಈ ಸೋಂಕಿರುವ ಅಸಲಿ ವ್ಯಕ್ತಿಯ ವಿಳಾಸ ಪತ್ತೆಯಾಗಿಲ್ಲ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಲು ಆರೋಗ್ಯ ಇಲಾಖೆ ಪ್ರಯತ್ನ ಮಾಡುತ್ತಿದ್ದು, ದೂರವಾಣಿಗೂ ಆತ ಸಿಗುತ್ತಿಲ್ಲ. ಆತನ ಹುಡುಕಾಟಕ್ಕೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.