ಬೆಂಗಳೂರು, ಮೇ 6 (Daijiworld News/MSP): ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ವೊಂದನ್ನು ನೀಡಿದ್ದು, 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಕ್ಷೌರಿಕರಿಗೆ, ನೇಕಾರರಿಗೆ, ಅಗಸ, ರಿಕ್ಷಾ ಚಾಲಕರಿಗೆ 5 ಸಾವಿರ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಇವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ. ಇನ್ನು ಕಟ್ಟಡ ಕಾರ್ಮಿಕರಿಗೆ ಹಿಂದೆ ಘೋಷಿಸಿದ್ದ 2 ಸಾವಿರ ರೂ. ಜೊತೆ ಹೆಚ್ಚುವರಿಯಾಗಿ 3 ಸಾವಿರ ಘೋಷಿಸಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ನಿಂದ ರಾಜ್ಯದ ದೇವಸ್ಥಾನಗಳು ಬಂದ್ ಆಗಿದ್ದು, ಹೂ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದು, ಪ್ರತಿ 1 ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುವುದು. ತರಕಾರಿ ಮತ್ತು ಹಣ್ಣು ಬೆಳಗಾರರಿಗೆ ಸೂಕ್ತ ಪರಿಹಾರ ನೀಡಲು ಒಂದು ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
ಇದಲ್ಲದೆ ಸಣ್ಣ ಮತ್ತು ಮದ್ಯಮ ಉದ್ಯಮಿಗಳಿಗೆ 2 ತಿಂಗಳ ವಿದ್ಯುತ್ ಬಿಲ್ ಮನ್ನಾ, ವಿದ್ಯುತ್ ಬಿಲ್ ಮುಂಗಡವಾಗಿ ಪಾವತಿಸುವ ಗ್ರಾಹಕರಿಗೆ ಶೇ. 1 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಬೃಹತ್ ಕೈಗಾರಿಕೆಗಳ 2 ತಿಂಗಳು ವಿದ್ಯುತ್ ಪಾವತಿಯಾಗದಿದ್ದರೂ ದಂಡ ವಸೂಲಿ ಮಾಡುವುದಿಲ್ಲ ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದರು