ಹೈದರಾಬಾದ್, ಮೇ 06 (Daijiworld News/MB) : ದೇಶಾದಾದ್ಯಂತ ಮೇ 17 ರ ವರೆಗೆ ಕೊರೊನಾ ಲಾಕ್ಡೌನ್ ಜಾರಿಯಲ್ಲಿರಲಿದ್ದು ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ತೆಲಂಗಾಣ ರಾಜ್ಯದಲ್ಲಿ ಮೇ 29ರ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರೇ ಲಾಕ್ ಡೌನ್ ವಿಸ್ತರಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿಯವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು ಮೇ 29 ರವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಸಂಜೆ 6 ಗಂಟೆಯೊಳಗೆ ಖರೀದಿ ಮಾಡಬೇಕು. ಸಂಜೆ 6 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿ ಇರುತ್ತದೆ. ಅಗತ್ಯ ವೈದ್ಯಕೀಯ ಉಪಕರಣಗಳನ್ನು ನಮ್ಮಲ್ಲಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. ಆದರೆ ಇದಕ್ಕೆ ಜನರ ಸಹಕಾರ ಅತ್ಯಗತ್ಯ. ವೈದ್ಯಕೀಯ ತುರ್ತು ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಮಕ್ಕಳು ಮನೆಯಿಂದ ಹೊರ ಬಾರದಂತೆ ಮನೆಯವರು ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಒಟ್ಟಾರೆಯಾಗಿ 1,096 ಕೊರೊನಾ ಪ್ರಕರಣಗಳು ದಾಖಲಾಗಿದ್ದು 29 ಮೃತಪಟ್ಟಿದ್ದಾರೆ. 585 ಜನರು ಗುಣಮುಖರಾಗಿದ್ದಾರೆ.