ಬೆಂಗಳೂರು,ಮೇ 6 (Daijiworld News/MSP): ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆಯ ನಡುವೆ ಮಹಾಮಾರಿ ಕೋವಿಡ್-19 ಆರ್ಭಟಿಸುತ್ತಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಬುಧವಾರದ ಬೆಳಗ್ಗಿನ ಮಾಹಿತಿಯಂತೆ ರಾಜ್ಯದಲ್ಲಿ 19 ಹೊಸ ಸೋಂಕಿತರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 13 ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡದಲ್ಲಿ ಇಬ್ಬರು ಬಾಲಕಿಯರ ಸಹಿತ ಮೂವರು, ಬೆಂಗಳೂರು ನಗರದಲ್ಲಿ ಎರಡು, ಕಲಬುರಗಿಯಲ್ಲಿ ಒಂದು ಪ್ರಕರಣ ದೃಢವಾಗಿದೆ.
ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ 607ರ ಸಂಪರ್ಕದಿಂದ 10 ಹಾಗೂ 15 ವರ್ಷದ ಬಾಲಕ ಸೇರಿ 45, 26, 47, 23, 32, 30 ವರ್ಷದ ವ್ಯಕ್ತಿಗಳು, 18 ವರ್ಷದ ಯುವತಿ, 55 ವರ್ಷದ ವೃದ್ಧೆ, 30 ವರ್ಷದ ಮಹಿಳೆ, 40 ವರ್ಷದ ಮಹಿಳೆ,16 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ. ಇವರಲ್ಲಿ 29 ಜನರು ಸಾವನ್ನಪ್ಪಿದರೆ, 345 ಜನರು ಗುಣಮುಖರಾಗಿದ್ದಾರೆ. ಮತ್ತು ಓರ್ವ ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾನೆ.