ಬೆಂಗಳೂರು, ಮೇ 06 (Daijiworld News/MB) : ಬಜೆಟ್ ಮರುಪರಿಶೀಲನೆ ನಡೆಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸುವುದೇನೆಂದರೆ, ಈಗಿನ ಆರ್ಥಿಕ ಸಂಕಷ್ಟ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಹಾಗೂ ಬಜೆಟ್ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳು ಶ್ರಮಿಕರ ಪರವಾಗಿ ಕೈಗೊಂಡಂತಹ ನಿರ್ಧಾರವನ್ನು ಕಾಂಗ್ರೆಸ್ ತಮಗೆ ಅಭಿನಂದಿಸುತ್ತದೆ. ಹಾಗೆಯೇ ವಿಶೇಷವಾಗಿ ಬಜೆಟ್ ಅಧಿವೇಶನವನ್ನು ಕರೆಯಬೇಕು ಎಂದು ಮನವಿ ಮಾಡುತ್ತೇವೆ. ಬಜೆಟ್ ಮರುಪರಿಶೀಲನೆ ಮಾಡುವ ಅಗತ್ಯವಿದೆ. ಎಲ್ಲಾ ವರ್ಗದ ಜನರಿಗೆ ನಾವು ಸಹಾಯ ಮಾಡಬೇಕು. ವೃತ್ತಿಪರರಿಗೆ, ವೃತ್ತಿಯನ್ನು ಉಳಿಸಿಕೊಂಡು ಬಂದಿರುವವರಿಗೆ, ಕಾರ್ಮಿಕರು, ವೈದ್ಯರು, ಚಾಲಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸಹಾಯ ಮಾಡುವ ಅಗತ್ಯವಿದೆ. ಇದಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಹೀಗಾಗಿ ಕೂಡಲೇ ಬಜೆಟ್ ಮರುಪರಿಶೀಲನೆ ಮಾಡಿ ಎಂದು ನಮೃವಾಗಿ ವಿನಂತಿಸುತ್ತೇನೆ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಸದ್ಯದ ಕಠಿಣ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ವೃತ್ತಿಪರರು, ರೈತರು, ದಿನಗೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಸಂಕಷ್ಟದಲ್ಲಿದ್ದು, ಅವರಿಗೆ ತಕ್ಷಣ ಆರ್ಥಿಕ ನೆರವಿನ ಅಗತ್ಯವಿದೆ. ಈ ಅಧಿವೇಶನ ಹೆಚ್ಚು ಪರಿಣಾಮಕಾರಿ ಹಾಗೂ ಅರ್ಥಪೂರ್ಣವಾಗಲಿದೆ. ದೇಶ ಕಟ್ಟುತ್ತಿರುವ ನಮ್ಮ ಸೋದರ, ಸೋದರಿಯರ ಹಿತ ಕಾಪಾಡುವ ಹೊಣೆ ನಮ್ಮೆಲ್ಲರದಾಗಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.