ಶ್ರೀನಗರ, ಮೇ 06 (Daijiworld News/MB) : ಕಾಶ್ಮೀರದಲ್ಲಿ ಮಂಗಳವಾರದಿಂದಲ್ಲೇ ಭದ್ರತಾಪಡೆ ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಬುಧವಾರ ಎನ್ಕೌಂಟರ್ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಮೋಸ್ಟ್ ವಾಂಟೆಡ್ ಉಗ್ರ ರಿಯಾಜ್ ನೈಕೂನ್ನು ಹಾಗೂ ಉಗ್ರ ಜುನೈದ್ ಸೆಹರೈನನ್ನು ಹೊಡೆದುರುಳಿಸಿದೆ.
ನೈಕೂ, ಬುರ್ಹಾನ್ ವಾನಿ ಬಳಿಕ ಹಿಜ್ಬುಲ್ ಸಂಘಟನೆಯ ನಾಯಕತ್ವ ವಹಿಸಿದ್ದು ಕಳೆದ ವರ್ಷದಿಂದ ತನ್ನ ಸಂಘಟನೆಗೆ ಯುವಕರನ್ನು ಸೇರಿಸಲೆಂದು ಹಲವಾರು ಅಪಹರಣಗಳನ್ನು ಮಾಡಿದ್ದನು. ಇನ್ನು ನೈಕೂ ಜೊತೆಯಲ್ಲೇ ಹತ್ಯೆಯಾದ ಜುನೈದ್ ಸೆಹರೈ ಜುನೈದ್ ತಹರೀಕ್ ಎ ಹುರಿಯತ್ ಸಂಘಟನೆಯ ಮುಖ್ಯಸ್ಥ ಅಶ್ರಫ್ ಸೆಹ್ರಾ ಮಗ ಮತ್ತು ಹುರಿಯತ್ ಮುಖ್ಯಸ್ಥ ಸಯೀದ್ ಅಲಿ ಗಿಲಾನಿಯ ಆಪ್ತ ಎನ್ನಲಾಗಿದೆ.
ಹಿಜ್ಬುಲ್ ಸಂಘಟನೆಯ ನಾಯಕತ್ವ ವಹಿಸಿದ್ದ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಯು 2016 ಜುಲೈ8ರಂದು ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಪ್ರದೇಶದಲ್ಲಿ ಹತ್ಯೆ ಮಾಡಿದ್ದು, ಆ ಬಳಿಕ ಹಿಜ್ಬುಲ್ ಸಂಘಟನೆಯ ನಾಯಕತ್ವ ವಹಿಸಿದ ನೈಕೂ ತಲೆಗೆ 12 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಉಗ್ರ ಸಂಘಟನೆ ಸೇರುವ ಮುನ್ನ ನೈಕೊ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡಿದ್ದು 33ನೇ ವಯಸ್ಸಿನಲ್ಲಿ ಉಗ್ರ ಸಂಘಟನೆ ಸೇರಿದ್ದನು. ಈತ ಪುಲ್ವಾಮದ ಬೈಗ್ಪೊರ ಗ್ರಾಮದಲ್ಲಿರುವ ತನ್ನ ತಾಯಿಯನ್ನು ಭೇಟಿಯಾಗಲು ಬಂದಿರುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.