ಬೆಂಗಳೂರು,ಮೇ 6 (Daijiworld News/MSP): ಲಾಕ್ ಡೌನ್ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಪಾನ ಪ್ರಿಯರಿಗೆ ಖುಷಿ ಕೊಟ್ಟಿದ್ದ ರಾಜ್ಯ ಸರ್ಕಾರ ಇದೀಗ ಅವರಿಗೆ ಬಿಸಿ ಮುಟ್ಟಿಸಲು ಹೊರಟಿಸಿದೆ. ಮದ್ಯದ ಮೇಲಿನ ಮಾರಾಟ ದರವನ್ನು ಶೇ. 17ರಷ್ಟು ಹೆಚ್ಚಳ ಮಾಡಿ ತನ್ನ ಖಾಲಿಯಾಗಿರುವ ರಾಜ್ಯದ ಬೊಕ್ಕಸ ಈ ಮೂಲಕ ತುಂಬಿಸಲು ಹೊರಟಿದೆ.
ನೂತನ ದರವು ಇನ್ನು ಒಂದೆರಡು ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ವರಮಾನ ನೀಡುವ ಇಲಾಖೆಗಳಲ್ಲಿ ಅಬಕಾರಿ ಇಲಾಖೆಯೇ ಮುಖ್ಯವಾದುದು. ಹೀಗಾಗಿ ರಾಜ್ಯ ಬಜೆಟ್ ನಲ್ಲಿ ಈ ಹಿಂದೆ ಮದ್ಯದ ಮಾರಾಟದ ಮೇಲಿನ ತೆರಿಗೆಯನ್ನು ಶೇ.6ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಶೇ. 11 ಹೆಚ್ಚಳ ಮಾಡಿದ್ದು ಒಟ್ಟು ಶೇ.17ರಷ್ಟು ತೆರಿಗೆ ಏರಿಕೆಯಾಗಲಿದೆ.
ದೆಹಲಿ, ಆಂಧ್ರಪ್ರದೇಶ, ತೆಲಾಂಗಣ ರಾಜ್ಯ ಸರ್ಕಾರಗಳು ಮದ್ಯದ ಮಾರಾಟ ದರ ಹೆಚ್ಚಳ ಮಾಡಿತ್ತು . ರಾಜ್ಯದಲ್ಲೂ ಬಾರ್, ಎಂಎಸ್ಐಎಲ್ ಮಳಿಗೆಗಳಲ್ಲಿ ಶೇ.6ರಷ್ಟು ದರ ಏರಿಸಿ ಮಾರಾಟ ಮಾಡಲಾಗುತ್ತಿದೆ. ಇನ್ನು ಹೊಸ್ ದರದ ಅನ್ವಯದ ಬಳಿಕ ಒಂದು ವೇಳೆ ಬಾಟಲ್ಗಳಲ್ಲಿ ಹಳೆಯ ದರವಿದ್ದರೂ ಹೊಸ ದರದಂತೆಯೇ ಗ್ರಾಹಕರಿಗೆ ಮಾರಾಟ ಮಾಡಲು ಅಬಕಾರಿ ಇಲಾಖೆ ಸೂಚನೆ ಕೊಟ್ಟಿದೆ.