ಕೋಲಾರ, ಮೇ 6 (Daijiworld News/MSP): ಸಾರಾಯಿ ನಶೆ ಏರಿಸಿಕೊಂಡಿದ್ದ ಕೋಲಾರದ ಮುಳುಬಾಗಿಲಿನ ಭೂಪನೊಬ್ಬ ಹಾವನ್ನೇ ಕಚ್ಚಿ ಕಚ್ಚಿ ಸಾಯಿಸಿದ ವೀಡಿಯೋ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಆರೋಪಿಯ ಸೆರೆಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು. ಇದೀಗ ಆರೋಪಿ ಎಂ ವಿ ಸತೀಶ್ ಕುಮಾರ್ ಅರಣ್ಯಾಧಿಕಾರಿಗಳ ಬಂಧಿಯಾಗಿದ್ದಾನೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದ ಎಂ ವಿ ಸತೀಶ್ ಕುಮಾರ್, ಮೇ.4ರಂದು ಬಾರ್ ಒಪನ್ ಆದ ಖುಷಿಯಲ್ಲಿ ಕಂಠ ಪೂರ್ತಿ ಕುಡಿದಿದ್ದ. ಮರು ದಿನ ತೋಟಕ್ಕೆ ಹೋಗಿ ಬಾಕಿ ಇದ್ದ ಮದ್ಯ ಕುಡಿದು ಬೈಕ್ ಏರಿ ಬರುವಾಗಲೇ ಸಿಕ್ಕ ಹಾವನ್ನು ಕೈಯಲ್ಲಿ ಹಿಡಿದು, ದಾರಿಯ ಮಧ್ಯದಲ್ಲಿಯೇ ಚರ್ಮ ಸುಲಿದು, ಕಚ್ಚಿ ಕಚ್ಚಿ ಸಾಯಿಸಿದ್ದ. ಈ ದೃಶ್ಯವನ್ನು ಸ್ಥಳದಲ್ಲಿದ್ದಂತ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.
ಈ ಸಂಬಂಧ ಸ್ವಯಂ ಪ್ರಕರಣ ದಾಖಲಸಿಕೊಂಡಿದ್ದ ಮುಳುಬಾಗಿಲು ಅರಣ್ಯಾಧಿಕಾರಿಗಳು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಅವರ ಬಲೆಗೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದ ಎಂ ವಿ ಸತೀಶ್ ಕುಮಾರ್ ಬಿದ್ದಿದ್ದಾನೆ. ಈ ಮೂಲಕ ಹಾವು ಕಚ್ಚಿ ತಿಂದು ಕೊಂದಿದ್ದ ಆರೋಪಿ ಬಂಧಿಸಿ, ಜೈಲಿಗಟ್ಟಿದ್ದಾರೆ.