ನವದೆಹಲಿ, ಮೇ 07 (Daijiworld News/MB) : ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 548 ವೈದ್ಯರು, ನರ್ಸ್ಗಳು, ಅರೆ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.
ಇನ್ನು ಈ 548 ಮಂದಿಯ ಪಟ್ಟಿಯಲ್ಲಿ ವಾರ್ಡ್ ಬಾಯ್ ಗಳು, ಫೀಲ್ಡ್ ವರ್ಕರ್ಗಳು, ನೈರ್ಮಲ್ಯ ಕಾರ್ಮಿಕರು, ಭದ್ರತಾ ಸಿಬಂದಿ, ಲ್ಯಾಬ್ ಸಹಾಯಕರು, ಗುಮಾಸ್ತರು, ಲಾಂಡ್ರಿ ಮತ್ತು ಅಡುಗೆ ಸಿಬಂದಿ ಸೇರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿಗೆ ದೇಶದಲ್ಲಿ ವೈದ್ಯರು ಕೂಡಾ ಬಲಿಯಾಗಿದ್ದು ಅದರ ಅಂಕಿ ಅಂಶ ಇನ್ನಷ್ಟೇ ತಿಳಿದು ಬರಬೇಕಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ 69 ವೈದ್ಯರಿಗೆ, 274 ಮಂದಿ ದಾದಿಯರು ಹಾಗೂ ಅರೆವೈದ್ಯಕೀಯ ಸಿಬಂದಿಗಳಿಗೆ ಕೊರೊನಾ ದೃಢಪಟ್ಟಿದೆ. ಹಾಗೆಯೇ ಆಸ್ಪ್ರತ್ರೆಯ ಕೆಲವು ಭದ್ರತಾ ಸಿಬ್ಬಂದಿಗೂ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಇನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಬುಧವಾರ ಮತ್ತೆ 85 ಬಿಎಸ್ಎಫ್ ಯೋಧರ ವರದಿ ಪಾಸಿಟಿವ್ ಬಂದಿದೆ. ಒಟ್ಟಾರೆಯಾಗಿ 400 ಯೋಧರಿಗೆ ಕೊರೊನಾ ದೃಢಪಟ್ಟಿದೆ.
ದೇಶಾದ್ಯಂತ ಕೇಂದ್ರ ಅರೆಸೇನಾ ಪಡೆಗಳ 286 ಮಂದಿಯ ವರದಿ ಪಾಸಿಟಿವ್ ಎಂದು ಬಂದಿದ್ದು, ಈ ಪೈಕಿ ಬಿಎಸ್ಎಫ್ನ 150, ಸಿಆರ್ಪಿಎಫ್ 146, ಐಟಿಬಿಪಿಯ 45, ಸಿಐಎಸ್ಎಫ್ನ 15 ಮತ್ತು ಸಶಸ್ತ್ರ ಸೀಮಾ ಬಲದ 13 ಮಂದಿಗೆ ಹಾಗೂ ಭದ್ರತಾ ಕರ್ತವ್ಯಕ್ಕಾಗಿ ಜೋಧ್ಪುರಕ್ಕೆ ತೆರಳಿದ್ದ 30 ಮಂದಿ ಬಿಎಸ್ಎಫ್ ಯೋಧರಿಗೆ ಸೋಂಕು ಇರುವುದು ದೃಢವಾಗಿದೆ.