ನವದೆಹಲಿ, ಮೇ 07 (Daijiworld News/MB) : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಆದ ಬಳಿಕ ಸುಮಾರು ಒಂದುವರೆ ತಿಂಗಳಿಂದ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಆರಂಭವಾಗಬಹುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ.
ಈ ಕುರಿತು ಬುಧವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾರತೀಯ ಬಸ್ ಮತ್ತು ಕಾರು ನಿರ್ವಾಹಕರ ಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಲಾಕ್ಡೌನ್ ಪರಿಣಾಮ ಸಾರಿಗೆ ಉದ್ಯಮವೂ ಕೂಡಾ ತೀವ್ರ ಸಂಕಷ್ಟದಲ್ಲಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ಶೀಘ್ರದಲ್ಲೇ ಆರಂಭವಾಗಬಹುದು, ಆ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಮಾರ್ಗಸೂಚಿಗಳ ಸಿದ್ಧತೆ ನಡೆಯುತ್ತಿದೆ. ಆರಂಭವಾದ್ದಲ್ಲಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕೈತೊಳೆಯುವುದು, ಸ್ಯಾನಿಟೈಜರ್ ಬಳಸುವುದು ಹಾಗೂ ಮಾಸ್ಕ್ ಧರಿಸುವುದು ಮೊದಲಾದ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ ಎಂದು ಹೇಳಿದ್ದಾರೆ.