ನವದೆಹಲಿ, ಮೇ 07 (Daijiworld News/MB) : "ಪ್ರತಿಯೊಬ್ಬರ ಸಮಸ್ಯೆಗಳನ್ನು ನೀಗಿಸು ಬುದ್ಧನ ಸಂದೇಶ ಮತ್ತು ಸಂಕಲ್ಪವು ಭಾರತದ ಸಂಸ್ಕೃತಿಗೆ ಮಾರ್ಗದರ್ಶಕವಾಗಿದೆ. ಬುದ್ಧ ಬೆಳಕಾಗಿ ಇತರರ ಜೀವನಕ್ಕೆ ಬೆಳಕಾದವನು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ಬುದ್ಧ ಪೂರ್ಣಿಮೆ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ. ಭಗವಾನ್ ಬುದ್ಧ ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಸಮೃದ್ಧಿಗೆ ಕೊಡುಗೆ ನೀಡಿದ್ದಾನೆ. ಬುದ್ಧ ಭಾರತದ ಸ್ವಯಂ ಸಾಕ್ಷಾತ್ಕಾರಕ್ಕೆ ಸಂಕೇತವಾಗಿದ್ದು ಈ ಸ್ವಯಂ ಸಾಕ್ಷಾತ್ಕಾರದಿಂದಾಗಿ ಭಾರತ ಮಾನವೀಯತೆ ಮತ್ತು ವಿಶ್ವದ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿಯಾಗಿ ನಾವು ಮುಂದುವರಿಯಲ್ಲಿದ್ದೇವೆ" ಎಂದು ಹೇಳಿದರು.
"ಈ ವರ್ಷ ದೈಹಿಕವಾಗಿ ಬುದ್ಧ ಪೂರ್ಣಿಮೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಆದರೆ ಸಂತೋಷದಿಂದ ನಿಮ್ಮೆಲ್ಲರೊಂದಿಗೆ ಒಟ್ಟುಗೂಡಲು ಈ ಸಂದರ್ಭ ಅನುವು ಮಾಡಿಕೊಡುತ್ತಿಲ್ಲ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲೂ ನಮ್ಮ ಸುತ್ತಲೂ ಇತರರಿಗೆ ಸಹಾಯ ಮಾಡಲು, ಕಾನೂನು ಸುವ್ಯವಸ್ಥೆ ಕಾಪಾಡಲು, ಸೋಂಕಿತರನ್ನು ಗುಣಪಡಿಸಲು ಮತ್ತು ಸ್ವಚ್ಛತೆ ಕಾಪಾಡಲು ಹಲವು ತ್ಯಾಗಗಳನ್ನು ಮಾಡುತ್ತಿರುವವರು ಇದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರೂ ಮೆಚ್ಚುಗೆ ಹಾಗೂ ಗೌರವಕ್ಕೆ ಪಾತ್ರರು" ಎಂದು ಶ್ಲಾಘಿಸಿದ್ದಾರೆ.
"ದೇಶದೊಳಗಿರಲಿ, ಹೊರಗಿರಲಿ ಇಂದು ಸಂಕಷ್ಟದಲ್ಲಿರುವ ಎಲ್ಲರ ಬೆಂಬಲವಾಗಿ ಭಾರತವಿದೆ. ವಿಶ್ವದಾದ್ಯಂತ ಇತರ ದೇಶಗಳಿಗೆ ಸಹಾಯ ಮಾಡಲು ನಿರಂತರವಾಗಿ ಭಾರತವು ಕಾರ್ಯ ನಿರ್ವಹಿಸುತ್ತಿದೆ. ನಾವು ಹಾಗೆಯೇ ಮುಂದುವರೆಯುತ್ತೇವೆ. ಕೊರೊನಾ ವೈರಸ್ ವಿರುದ್ಧ ಹೋರಾಡಿ ಕೊರೊನಾವನ್ನು ಮಣಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಾಗಿದೆ" ಎಂದು ತಿಳಿಸಿದರು.