ನವದೆಹಲಿ,ಮೇ 7 (Daijiworld News/MSP): ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಕರೆತರಲು ಭಾರತ ಸರ್ಕಾರ ಆರಂಭಿಸಿರುವ ಐತಿಹಾಸಿಕ ಏರ್ ಲಿಫ್ಟ್ ಇಂದಿನಿಂದ ಆರಂಭವಾಗಲಿದ್ದು, ಇದು ವಿಶ್ವದ ಅತೀ ದೊಡ್ಡ ಏರ್ ಲಿಫ್ಟ್ ಆಗಿದ್ದು ಈ ಮೂಲಕ ಹೊಸ ಭಾಷ್ಯ ಬರೆಯಲು ಭಾರತ ಸಿದ್ಧವಾಗಿದೆ. ಇದಕ್ಕಾಗಿ ಇಂದಿನಿಂದ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ 13 ದೇಶದಲ್ಲಿದ್ದ 14,800 ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗುತ್ತಿದೆ.
ಇಂದು ಆರು ದೇಶಗಳಿಂದ ಬರುವ ಏಳು ವಿಶೇಷ ವಿಮಾನಗಳಲ್ಲಿ ಆಗಮಿಸುವ 2350 ಕ್ಕೂ ಹೆಚ್ಚು ಜನರ ಸ್ವಾಗತಕ್ಕೆ ವಿಮಾನ ನಿಲ್ದಾಣಗಳು ಸಜ್ಜಾಗಿ ನಿಂತಿದೆ. ಇದಲ್ಲದೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ತಪಾಸಣೆ ಗೆ ಹಾಗೂ ಕ್ವಾರಂಟೈನ್ ಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಂದು ಮಧ್ಯರಾತ್ರಿ ಸುಮಾರು 700 ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುವ ಸಾಧ್ಯತೆ ಇದೆ. ಕೆಐಎಎಲ್ ನಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಇವರ ಕಾರೆಂಟೈನ್ ಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಹೋಟೆಲ್, ವಸತಿ ಶಾಲೆಗಳಲ್ಲಿ, ಕಲ್ಯಾಣ ಮಂಟಪ, ಖಾಸಗಿ/ಸರ್ಕಾರಿ ಆಸ್ಪತ್ರೆಗಳನ್ನು ಕ್ವಾರೆಂಟೈನ್ ಸೆಂಟರ್ ಗಳಾಗಿ ಮಾರ್ಪಾಡು ಮಾಡಲಾಗಿದೆ.
ಎಲ್ಲೆಲ್ಲಿಗೆ ಎಷ್ಟು ವಿಮಾನ:
ಯುಎಇ ಗೆ 10, ಅಮೆರಿಕಾ, ಇಂಗ್ಲೆಂಡ್ , ಮಲೇಷ್ಯಾ, ಬಾಂಗ್ಲಾದೇಶ ಗಳಿಗೆ ತಲಾ 7, ಸೌದ್ ಅರೇಬಿಯಾ, ಸಿಂಗಾಪುರಗಳಿಗೆ ತಲಾ 5 ಮತ್ತು ಬಹ್ರೈನ್ ಓಮನ್ ಕತಾರ್ ಗಳಿಗೆ 2 ವಿಮಾನಗಳು ಹಾರಾಡಲಿದೆ