ಕೊಚ್ಚಿ, ಮೇ 07 (Daijiworld News/MB) : ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ದೃಢಪಟ್ಟ ಕೇರಳದಲ್ಲಿ ಇದೀಗ ಪ್ರಸ್ತುತ 30 ಕೊರೊನಾ ಪ್ರಕರಣಗಳು ಮಾತ್ರ ಸಕ್ರಿಯವಾಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.
ಜನವರಿ 30 ರಂದು ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಕೇರಳದಲ್ಲಿ ದೃಢಪಟ್ಟಿದ್ದು ಆ ಬಳಿಕ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಇರುತ್ತಿತ್ತು. ಆ ಮೂಲಕ ಮುಂದೆ ಕೇಳರದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಡುತ್ತದೆ ಎಂಬುದು ಹಲವರ ಮಾತಾಗಿತ್ತು. ಆದರೆ ಇದೀಗ 30 ಕೊರೊನಾ ವೈರಸ್ ಸೋಂಕಿತರು ಮಾತ್ರವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೇರಳ ಆತಂಕವನ್ನು ನೀಗಿಸಿದೆ.
ಇನ್ನು ಕರ್ನಾಟಕ ಕೊರೊನಾ ನಿಯಂತ್ರಣದಲ್ಲಿ ಕೇರಳದ ನಂತರದ ಸ್ಥಾನ ಪಡೆದಿದ್ದು ಕರ್ನಾಟಕದಲ್ಲಿ ಈವರೆಗೆ ಶೇ. 49.18% ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಕರ್ನಾಟಕದಲ್ಲಿ 693 ಸೋಂಕಿತರ ಪೈಕಿ 354 ಮಂದಿ ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಕೇರಳದಲ್ಲಿ ಈವರೆಗೆ 503 ಜನರಲ್ಲಿ ಸೋಂಕು ದೃಢಪಟ್ಟಿದ್ದು ಈ ಪೈಕಿ ನಾಲ್ವರು ಸಾವನಪ್ಪಿದ್ದರೆ 469 ಮಂದಿ ಗುಣಮುಖರಾಗಿದ್ದಾರೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಕೇರಳ ರಾಜ್ಯದಲ್ಲೇ ಯಾವುದೇ ಕೊರೊನಾ ಪ್ರಕರಣಗಳು ದೃಢಪಟ್ಟಿಲ್ಲ.
ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರವಾಗಿ ಕೇರಳದಲ್ಲಿ ಶೇ. 93.24% ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿದ್ದು ದೇಶದ ಎಲ್ಲಾ ರಾಜ್ಯಗಳಿಗಿಂತ ಗುಣಮುಖರಾದ ಕೊರೊನಾ ಸೋಂಖಿತರ ಸಂಖ್ಯೆ ಕೇರಳದಲ್ಲಿ ಅಧಿಕ. ಇನ್ನು ಕರ್ನಾಟಕದಲ್ಲಿ ಈವರೆಗೆ ಶೇ. 49.18% ರಷ್ಟು ಮಂದಿ ಗುಣಮುಖರಾಗಿದ್ದಾರೆ.