ಆಂಧ್ರಪ್ರದೇಶ, ಮೇ 7 (Daijiworld News/MSP): ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಮಲ್ಟಿನ್ಯಾಶನಲ್ ರಾಸಾಯನಿಕ ಕಂಪನಿಯೊಂದರಲ್ಲಿ ವಿಷ ಅನಿಲ ಸೋರಿಕೆಯಾಗಿ ಸುಮಾರು 10 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈಗಾಗಲೇ 200ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಇದಲ್ಲದೆ ಗ್ರಾಮದ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಆತಂಕ ಮನೆಮಾಡಿದೆ. ಸುತ್ತಮುತ್ತಲ ಗ್ರಾಮಸ್ಥರಲ್ಲಿ ಗಂಟಲು ಹಾಗೂ ಚರ್ಮದ ಸಮಸ್ಯೆ ಕಾಣಿಸಿಕೊಂಡಿದ್ದು, ಈವರೆಗೆ ಸುಮಾರು ಒಂದೂವರೆ ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನು ದುರ್ಘಟನೆಯಿಂದಾಗಿ 5 ಸಾವಿರ ಮಂದಿ ಅಸ್ವಸ್ಥರಾಗಿದ್ದಾರೆಂದು ಹೇಳಲಾಗುತ್ತಿದೆ.
ಘಟನೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ಆಂಧ್ರಪ್ರದೇಶ ಗೃಹಸಚಿವಾಲಯದ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಘಟನೆಯ ಸಂಪೂರ್ಣ ವರದಿ ಕೇಳಿದ್ದಾರೆ. ಹಾಗೇ ಸ್ಥಳದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯ ಬಗ್ಗೆಯೂ ವಿಚಾರಿಸಿದ್ದಾರೆ.
ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಯಾರೂ ಕೆರೆ, ಬೋರ್ ವೆಲ್ ಸೇರಿದಂತೆ ಇತರೇ ಮೂಲಗಳಿಂದ ನೀರು ಸೇವಿಸದಂತೆ ಸೂಚಿಸಲಾಗಿದೆ. ಇದೇ ವೇಳೆ, ವಿಶಾಖಪಟ್ಟಣಂನಲ್ಲೂ ಭಾರಿ ಆತಂಕ ಮನೆಮಾಡಿದ್ದು, ನಾಗರಿಕರಿಗೆ ಯಾರೂ ಮನೆಗಳಿಂದ ಹೊರಬರಬೇಡಿ, ಮೂಗು ಹಾಗೂ ಬಾಯಿಗೆ ಒದ್ದೆ ಬಟ್ಟೆಗಳನ್ನು ಕಟ್ಟಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ, ಕೊರೊನಾ ಹಿನ್ನೆಲೆಯಲ್ಲಿ ವಲಸೆಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ವಿಶಾಖಪಟ್ಟಣಂ ಮಾರ್ಗದ ಸಂಚಾರವನ್ನು ಬದಲಿಸಲಾಗಿದೆ. ರಾಸಾಯನಿಕ ಕಂಪನಿಯಿಂದ ಸುಮಾರು 2000 ಮೆಟ್ರಿಕ್ ಟನ್ಗಳಷ್ಟು ವಿಷ ಅನಿಲ ಸೋರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಎನ್ಡಿಎಂಎ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.