ಬೆಂಗಳೂರು, ಮೇ 7 (Daijiworld News/MSP): ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದ್ದು ಇದೀಗ ಸೋಂಕಿತರ ಸಂಖ್ಯೆ 700 ರ ಗಡಿ ತಲುಪಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಧ್ಯಾಹ್ನ 12 ಗಂಟೆಯ ಹೆಲ್ತ್ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಇಂದು ಮತ್ತೆ 8 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆ ಕಂಡಿದೆ.
ಈ ಪೈಕಿ ದಾವಣಗೆರೆಯಲ್ಲಿ 3, ಕಲಬುರಗಿಯಲ್ಲಿಯೂ 3 ಹಾಗೂ ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ತಲಾ 1 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇದರೊಂದಿಗೆ ಸೋಂಕಿತರ ಪೈಕಿ 18 ಜನರು ಸಂಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದನ್ನು ಸೇರಿ, ರಾಜ್ಯದಲ್ಲಿ ಒಟ್ಟು 363 ಜನರು ಕೊರೊನಾ ಸೋಂಕು ಮುಕ್ತವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ದಾವಣಗೆರೆಯಲ್ಲಿ ಮತ್ತೊಬ್ಬ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಒಟ್ಟು 30 ಜನರು ಸಾವನ್ನಪ್ಪಿದ್ದಾರೆ.