ಬೆಂಗಳೂರು, ಮೇ 07 (Daijiworld News/MB) : ಆರ್ಥಿಕ ಸಂಕಷ್ಟದಲ್ಲಿರುವ ರೈತರ ಬಗ್ಗೆ ಕಾಳಜಿಯಿಂದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ಯಾಕೇಜ್ ಘೋಷಿಸಿದ್ದಾರೆ, ಶೀಘ್ರವೇ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ಪ್ಯಾಕೇಜ್ ಪ್ರಕಟವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಾಗಿ ವಿಕಾಸಸೌಧದ ಕಚೇರಿಯಲ್ಲಿ ಗುರುವಾರ ವರದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ನಿಂದ ಕಷ್ಟದಲ್ಲಿರುವ ರೈತರ ಸಮಸ್ಯೆ ತಿಳಿದು ರೈತರಿಗೆ ನೆರವು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಅವರು ವಿಶೇಷವಾಗಿ ಹೂ ಬೆಳೆಗಾರರಿಗೆ ಪ್ಯಾಕೇಜ್ ನೀಡಿದ್ದಾರೆ. ಇನ್ನು ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಇಷ್ಟೇ ಪರಿಹಾರ ನೀಡಿ ಎಂದು ಆಗ್ರಹಿಸುವುದಿಲ್ಲ. ಪರಿಹಾರ ಎನ್ನುವುದು ಸಾವಿನ ಸಂದರ್ಭದಲ್ಲಿ ಬಾಯಿಗೆ ನೀರು ಬಿಟ್ಟಂತೆ ಸಹಾಯವಾಗಲಿದೆಎಂದು ಹೇಳಿದ್ದಾರೆ.
ರಾಜ್ಯದ ಅಗ್ರಿ ವಾರ್ ರೂಮ್ನ್ನು ಕೇಂದ್ರ ಕೂಡಾ ಮೆಚ್ಚಿ ಕೊಂಡಿದೆ. ರಾಯಚೂರು ಕೊಪ್ಪಳ ಭಾಗದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾಗಿದ್ದ ಬತ್ತದ ಬೆಳೆಗೆ ವರದಿ ಕೊಟ್ಟ ಮೂರೇ ದಿನದಲ್ಲಿ ಮುಖ್ಯಮಂತ್ರಿಗಳ ₹45 ಕೋ. ಪರಿಹಾರ ಘೋಷಿಸಿದರು. ಲಾಕ್ಡೌನ್ ಘೋಷಣೆಯಾದಂತೆ ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಲು ಬದ್ಧ ಎಂದು ಭರವಸೆ ನೀಡಿದರು.
ಇನ್ನು ಕಳಪೆ ಬಿತ್ತನೆ ಬೀಜದ ಮಾಫಿಯಾದ ಮೂಲವನ್ನು ಪತ್ತೆಹಚ್ಚಲಾಗಿದೆ. ಆಂಧ್ರದಲ್ಲಿ ತಿರಸ್ಕರಿಸಲ್ಪಟ್ಟ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳು ಸೇರಿದಂತೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಕಳಪೆ ಬೀಜ ವಶಕ್ಕೆ ಪಡೆದು ಎಂಟು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದರು.